
ಭಾಗಲ್ಪುರ: ‘ಬಿಹಾರದಲ್ಲಿ ಆರ್‌ಜೆಡಿ–ಕಾಂಗ್ರೆಸ್ ಮೈತ್ರಿಯು ನುಸುಳುಕೋರರಿಗೆ ಹಿಂಬಾಗಿಲು ತೆರೆದಿಟ್ಟಿದ್ದು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಮನ ಮೇಲೆ ದ್ವೇಷ ಸಾಧಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಭಾಗಲ್ಪುರ ಮತ್ತು ಅರರಿಯಾ ಜಿಲ್ಲೆಗಳಲ್ಲಿ ಗುರುವಾರ ನಡೆದ ಚುನಾವಣಾ ರ್‍ಯಾಲಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ವಿರೋಧ ಪಕ್ಷದ ಮುಖಂಡರು ಆಯೋಧ್ಯೆ ಸೇರಿ ಪ್ರಮುಖ ಧಾರ್ಮಿಕ ತಾಣಗಳಿಗೆ ಭೇಟಿ ನೀಡದಿರುವುದು ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದವರ ಮೇಲೆ ಅವರಿಗಿರುವ ದ್ವೇಷವನ್ನು ಸೂಚಿಸುತ್ತದೆ’ ಎಂದರು.
‘ಜಂಗಲ್ ರಾಜ್’ ಆಡಳಿತದ 15 ವರ್ಷಗಳಲ್ಲಿ ಬಿಹಾರದಲ್ಲಿ ಅಭಿವೃದ್ದಿ ಶೂನ್ಯವಾಗಿತ್ತು. ಈ ಅವಧಿಯಲ್ಲಿ ಕತ್ತಿ, ಕ್ರೌರ್ಯ, ನಿರ್ದಯ, ದುರಾಡಳಿತ ಮತ್ತು ಭ್ರಷ್ಟಾಚಾರವೇ ಹೆಗ್ಗುರುತುಗಳಾಗಿದ್ದವು. ಈ ಕತ್ತಲೆ ಯುಗದಿಂದ ಬಿಹಾರವನ್ನು ಹೊರತರಲು ಎನ್‌ಡಿಎ ನೇತೃತ್ವದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಾಕಷ್ಟು ಶ್ರಮ ವಹಿಸಿದರು. ಈಗ ಬಿಹಾರ ಅಭಿವೃದ್ಧಿ ಪಥದಲ್ಲಿದೆ. ಅಭಿವೃದ್ಧಿಗೆ ಅಡ್ಡಿಯಾಗಿರುವ ನುಸುಳುಕೋರರನ್ನು ಮಟ್ಟ ಹಾಕುವುದೇ ಈಗಿನ ಪ್ರಮುಖ ಸವಾಲಾಗಿದೆ’ ಎಂದರು.
ನುಸುಳುಕೋರರು, ಅಕ್ರಮ ವಲಸಿಗರನ್ನು ಬೆಂಬಲಿಸುವ ನಿಟ್ಟಿನಲ್ಲಿ ರಾಜಕೀಯ ಯಾತ್ರೆಗಳು ನಡೆದವು’ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ‘ಮತದಾರರ ಅಧಿಕಾರ ಯಾತ್ರೆ’ಯನ್ನು ಮೋದಿ ಟೀಕಿಸಿದರು.
ಬಿಹಾರದಲ್ಲಿ ಜಂಗಲ್ ರಾಜ್ ಮರಳುವುದನ್ನು ತಡೆಯಲು ಮಹಿಳೆಯರು ಗುರುವಾರ ಮತಗಟ್ಟೆಗಳಲ್ಲಿ ಭದ್ರ ಕೋಟೆ ನಿರ್ಮಿಸಿರುವ ದೃಶ್ಯ ಕಂಡುಬಂತು– ನರೇಂದ್ರ ಮೋದಿ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.