
ನವದೆಹಲಿ: ಮಾಜಿ ಕೇಂದ್ರ ಸಚಿವರೊಬ್ಬರು ಬಿಹಾರದಲ್ಲಿ ವಿದ್ಯುತ್ ಖರೀದಿಗೆ ಸಂಬಂಧಿಸಿದ ಹಗರಣವನ್ನು ಬಹಿರಂಗಪಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಶುಕ್ರವಾರ ಹೇಳಿದ್ದಾರೆ.
ಬಿಹಾರದ ಸರ್ಕಾರಿ ವ್ಯವಸ್ಥೆಯು ರಿಮೋಟ್ ಕಂಟ್ರೋಲ್ ಆಗಿದೆ ಎಂದು ತಿಳಿದಿರುವ ಜನರು ಸದ್ಯ ನಡೆಯುತ್ತಿರುವ ಚುನಾವಣೆಯಲ್ಲಿ ಎನ್‌ಡಿಎಯನ್ನು ತಿರಸ್ಕರಿಸುತ್ತಿದ್ದಾರೆ ಎಂದಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅದಾನಿ ಗ್ರೂಪ್ ಬಿಹಾರದಲ್ಲಿ ರೆಡ್ ಕಾರ್ಪೆಟ್ ಟ್ರೀಟ್ಮೆಂಟ್ ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲು ಮಾಡಲಾಗುವುದು, ಇದಕ್ಕೆ ಕಾರಣರಾದವವರನ್ನು ಶಿಕ್ಷಿಸಲಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಅಕ್ರಮದ ಆರೋಪಗಳಿದ್ದರೂ ಸರ್ಕಾರ, ಬಿಜೆಪಿ ಅಥವಾ ಅದಾನಿ ಗ್ರೂಪ್‌ನಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದೂರಿದ್ದಾರೆ.
‘2017ರಿಂದ 2024ರವರೆಗೆ ಕೇಂದ್ರ ವಿದ್ಯುತ್ ಸಚಿವರಾಗಿ ಸೇವೆ ಸಲ್ಲಿಸಿದ್ದ ಆರ್.ಕೆ. ಸಿಂಗ್, ಪ್ರಧಾನಿ ಬಿಹಾರದಲ್ಲಿ ಅದಾನಿಗೆ ರೆಡ್ ಕಾರ್ಪೆಟ್ ಟ್ರೀಟ್ ನೀಡಿದ್ದರಿಂದ ನಡೆದಿರುವ ₹60,000 ಕೋಟಿ ಹಗರಣವನ್ನು ಈಗ ಬಯಲು ಮಾಡಿದ್ದಾರೆ. ಅದಾನಿ ಕಂಪನಿಯಿಂದ ಯೂನಿಟ್‌ಗೆ ₹6 ಅಧಿಕ ಬೆಲೆ ನೀಡಿ ವಿದ್ಯುತ್ ಖರೀದಿಸುವ ಬಿಹಾರ ಸರ್ಕಾರದ ಪ್ರಸ್ತಾಪವು ಬಡವರು ಮತ್ತು ಮಧ್ಯಮ ವರ್ಗದವರ ಸಂಪತ್ತನ್ನು ಮೋದಿಯ ಆಪ್ತ ಮಿತ್ರರ ಖಜಾನೆಗೆ ಸಂಪೂರ್ಣವಾಗಿ ಹರಿದು ಬರುವಂತೆ ಮಾಡುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ’ ಎಂದು ವೇಣುಗೋಪಾಲ್ ಎಕ್ಸ್ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.
'ಈ ಚುನಾವಣೆಗಳಲ್ಲಿ ಬಿಹಾರದ ಜನರು ಎನ್‌ಡಿಎಯನ್ನು ತಿರಸ್ಕರಿಸುತ್ತಿದ್ದಾರೆ. ಏಕೆಂದರೆ, ಇಡೀ ವ್ಯವಸ್ಥೆಯು ಪ್ರಧಾನಿ ಕಚೇರಿ ಮೂಲಕ ರಿಮೋಟ್ ಕಂಟ್ರೋಲ್ ರೀತಿ ನಿರ್ವಹಿಸಲ್ಪಡುತ್ತಿದ್ದು, ಅದಾನಿ ಮತ್ತು ಅಂತಹವರಿಗೆ ಲೂಟಿ ಯಂತ್ರವಾಗಿದೆ. ಈ ಭ್ರಷ್ಟಾಚಾರವನ್ನು ಬಹಿರಂಗಪಡಿಸಲಾಗುತ್ತದೆ ಮತ್ತು ಇದರಲ್ಲಿ ಭಾಗಿಯಾಗಿರುವವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ’ಎಂದು ಗುಡುಗಿದ್ದಾರೆ.
ಬಿಹಾರ ವಿಧಾನಸಭೆಗೆ ಗುರುವಾರ ಮೊದಲ ಹಂತದ ಮತದಾನ ನಡೆದಿದ್ದು, ಎರಡನೇ ಹಂತದ ಮತದಾನ ನವೆಂಬರ್ 11ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.