ಬಂಧನ
ಪಟ್ನಾ: ಅಭ್ಯರ್ಥಿಗಳಿಂದ ಹಣ ಪಡೆದು ಅವರ ಪರವಾಗಿ ನೀಟ್–ಯುಜಿ ಪರೀಕ್ಷೆ ಬರೆಯುವ ಜಾಲ ರೂಪಿಸಿಕೊಂಡಿದ್ದ ಇಬ್ಬರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಆರು ಅಭ್ಯರ್ಥಿಗಳ ಪ್ರವೇಶ ಪತ್ರಗಳು ಪೊಲೀಸರಿಗೆ ದೊರೆತಿವೆ.
ಭಾನುವಾರ ನಡೆದಿದ್ದ ಪರೀಕ್ಷೆತ ವೇಳೆ ಅಕ್ರಮ ನಡೆಸಲಾಗಿದೆ. ಪ್ರಮುಖ ಆರೋಪಿ ಡಾ. ರಂಜಿತ್ ಕುಮಾರ್‌ಗೆ ಸಹಕಾರ ನೀಡುತ್ತಿದ್ದ ರಾಮ್ ಬಾಬು ಮಲ್ಲಿಕ್ ಅವರನ್ನೂ ಬಂಧಿಸಲಾಗಿದೆ. ಇವರು ದರ್ಭಾಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನಾಲ್ಕನೇ ದರ್ಜೆ ನೌಕರರಾಗಿದ್ದಾರೆ. ರಂಜಿತ್, ಬೇಗುಸರಾಯ್‌ನ ಜೈಲಿನಲ್ಲಿ ಸರ್ಕಾರಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ಬೇರೆಯವರ ಪರವಾಗಿ ಪರೀಕ್ಷೆ ಬರೆಯುವುದಕ್ಕೆ ಈ ಜಾಲವು ಸುಮಾರು ₹8 ಲಕ್ಷದಿಂದ ₹10 ಲಕ್ಷ ಪಡೆದುಕೊಳ್ಳುತ್ತದೆ. ಪರೀಕ್ಷೆ ಬರೆಯುವುದಕ್ಕೆ ಮುಂಚೆ ಒಂದಿಷ್ಟು ಹಣ ನೀಡಬೇಕಾಗುತ್ತದೆ. ಫಲಿತಾಂಶ ಬಂದ ಬಳಿಕ ಪೂರ್ಣ ಪಾವತಿ ಮಾಡಬೇಕಾಗುತ್ತದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
ಹೆಚ್ಚಾಗಿ ಎಂಬಿಬಿಎಸ್ ವಿದ್ಯಾರ್ಥಿಗಳಿಂದ ಪರೀಕ್ಷೆ ನಡೆಸಲಾಗುತ್ತದೆ. ಬಂಧಿತರನ್ನು 14 ದಿನಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.