ADVERTISEMENT

ಬಿಹಾರ: ಮೂವರು ನ್ಯಾಯಾಧೀಶರ ವಜಾ

ಪಿಟಿಐ
Published 22 ಡಿಸೆಂಬರ್ 2020, 17:43 IST
Last Updated 22 ಡಿಸೆಂಬರ್ 2020, 17:43 IST
   

ಪಟ್ನಾ: ಕೆಲ ವರ್ಷಗಳ ಹಿಂದೆ ನೇಪಾಳದ ಹೋಟೆಲ್‌ ಒಂದರಲ್ಲಿ ಮಹಿಳೆಯೊಬ್ಬರ ಜೊತೆ ಲೈಂಗಿಕ ಸಂಪರ್ಕದಲ್ಲಿದ್ದ ವೇಳೆ ಸಿಕ್ಕಿಬಿದ್ದಿದ್ದ ಬಿಹಾರದ ಮೂವರು ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಹರಿನಿವಾಸ್‌ ಗುಪ್ತಾ, ಜಿತೇಂದ್ರ ನಾಥ್‌ ಸಿಂಗ್‌ ಹಾಗೂ ಕೋಮಲ್‌ ರಾಮ್‌ ವಜಾಗೊಂಡ ಅಧಿಕಾರಿಗಳು. 2014 ಫೆ.12ರಿಂದ ಅನ್ವಯವಾಗುವಂತೆ ಈ ಅಧಿಕಾರಿಗಳನ್ನು ವಜಾಗೊಳಿಸಲಾಗಿದ್ದು, ನಿವೃತ್ತಿ ನಂತರದ ಯಾವುದೇ ಸೌಲಭ್ಯಗಳು ಇವರಿಗೆ ದೊರಕುವುದಿಲ್ಲ ಎಂದು ರಾಜ್ಯ ಆಡಳಿತ ಇಲಾಖೆಯು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಗುಪ್ತಾ, ಸಮಸ್ತಿಪುರದಲ್ಲಿ ಕೌಟುಂಬಿಕ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದರು.

ಸಿಂಗ್‌ ಹಾಗೂ ರಾಮ್‌, ಅರಾರಿಯಾದಲ್ಲಿ ಕ್ರಮವಾಗಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಹಾಗೂ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಿರಾಟ್‌ನಗರದಲ್ಲಿರುವ ಹೋಟೆಲ್‌ ಒಂದರ ಮೇಲೆ ನೇಪಾಳ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಮೂವರನ್ನು ಬಂಧಿಸಲಾಗಿತ್ತು.

ADVERTISEMENT

ಅವರನ್ನು ಪೊಲೀಸರು ನಂತರ ಬಿಡುಗಡೆಗೊಳಿಸಿದರೂ, ನೇಪಾಳದ ಪತ್ರಿಕೆಯೊಂದು ಈ ಕುರಿತು ವರದಿ ಪ್ರಕಟಿಸಿದ ಬಳಿಕ ಘಟನೆ ಬಹಿರಂಗವಾಗಿತ್ತು. ಪಟ್ನಾ ಹೈಕೋರ್ಟ್‌ ಅವರ ವಿರುದ್ಧ ತನಿಖೆಗೆ ಆದೇಶಿಸಿತ್ತು. ಇದರಲ್ಲಿ ಅವರು ತಪ್ಪಿತಸ್ಥರು ಎಂದು ಸಾಬೀತಾಗಿತ್ತು ಹಾಗೂ ಅವರನ್ನು ಸೇವೆಯಿಂದ ವಜಾಗೊಳಿಸಲು ಶಿಫಾರಸು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.