ADVERTISEMENT

ಬಿಹಾರ: ಮಾಜಿ ಶಾಸಕ ಅನಂತ್‌ ಸಿಂಗ್‌ ಬಂಧನ 

ದುಲಾರ್‌ ಚಾಂದ್‌ ಯಾದವ್‌ ಹತ್ಯೆ ಪ್ರಕರಣ

ಪಿಟಿಐ
Published 2 ನವೆಂಬರ್ 2025, 20:44 IST
Last Updated 2 ನವೆಂಬರ್ 2025, 20:44 IST
<div class="paragraphs"><p>ಅನಂತ್‌ ಸಿಂಗ್‌ </p></div>

ಅನಂತ್‌ ಸಿಂಗ್‌

   

ಪಾಟ್ನಾ: ರಾಜಕಾರಣಿಯಾಗಿ ಬದಲಾದ ಗ್ಯಾಂಗ್‌ಸ್ಟರ್‌, ಜನ್‌ ಸುರಾಜ್ ಪಕ್ಷದ ಬೆಂಬಲಿಗ ದುಲಾರ್‌ ಚಾಂದ್‌ ಯಾದವ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕಾಮಾ ಕ್ಷೇತ್ರದ ಜೆಡಿಯು ಅಭ್ಯರ್ಥಿ, ಮಾಜಿ ಶಾಸಕ ಅನಂತ್‌ ಸಿಂಗ್‌ ಸೇರಿ ಮೂವರನ್ನು ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.

ಅನಂತ್‌ ಸಿಂಗ್‌ ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ADVERTISEMENT

ಅನಂತ್‌ ಸಿಂಗ್‌ ಮತ್ತು ಬರ್ಹ್‌ನಲ್ಲಿರುವ ಅವರ ನಿವಾಸದಲ್ಲೇ ಇದ್ದ ಇನ್ನಿಬ್ಬರು ಆರೋಪಿಗಳಾದ ಮಣಿಕಾಂತ್‌ ಠಾಕೂರ್‌ ಮತ್ತು ರಂಜಿತ್‌ ರಾಮ್‌ ಅವರನ್ನೂ ಬಂಧಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.  

ಪಾಟ್ನಾದ ಮೊಕಾಮಾ ಕ್ಷೇತ್ರದಲ್ಲಿ ಜನ್‌ ಸುರಾಜ್‌ ಪಕ್ಷದ ಅಭ್ಯರ್ಥಿ ಪೀಯೂಷ್‌ ಪ್ರಿಯದರ್ಶಿನಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಅನುಮಾನಾಸ್ಪದವಾಗಿ ಯಾದವ್‌ ಮೃತಪಟ್ಟಿದ್ದರು. ಅವರ ಮರಣೋತ್ತರ ಪರೀಕ್ಷೆ ವರದಿ ಮತ್ತು ಪ್ರಾಥಮಿಕ ತನಿಖೆ ಆಧರಿಸಿ ಪೊಲೀಸರು ಇದೊಂದು ಕೊಲೆ ಪ್ರಕರಣ ಎಂಬ ನಿರ್ಧಾರಕ್ಕೆ ಬಂದಿದ್ದರು.

ಯಾದವ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಇದರಲ್ಲಿ ಒಂದರಲ್ಲಿ ಅನಂತ್‌ ಸಿಂಗ್‌ ಹೆಸರಿದೆ. ಮೊಕಾಮಾ ಕ್ಷೇತ್ರದಲ್ಲಿ ಅನಂತ್‌ ಸಿಂಗ್‌ ವಿರುದ್ಧ ಆರ್‌ಜೆಡಿ ಅಭ್ಯರ್ಥಿ, ಮಾಜಿ ಸಂಸದೆ ವೀಣಾ ದೇವಿ ಕಣದಲ್ಲಿದ್ದಾರೆ. ವೀಣಾ ದೇವಿ ಅವರ ಪತಿ ಸೂರಜ್‌ಭಾನ್‌ ಸಿಂಗ್‌ ಕ್ರಿಮಿನಲ್‌ ಆರೋಪಗಳನ್ನು ಹೊಂದಿರುವ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಹೀಗಾಗಿ
ಅವರ ಪತ್ನಿಯನ್ನು ಆರ್‌ಜೆಡಿ ಕಣಕ್ಕಿಳಿಸಿದೆ. ಅವರ ವಿರುದ್ಧ  ಅನಂತ್‌ ಸಿಂಗ್‌ ಕಣದಲ್ಲಿದ್ದಾರೆ.

ಉತ್ತರಕ್ರಿಯೆ  ಮಾಡುವುದಿಲ್ಲ: ‘ಎಲ್ಲ ಐವರು ಆರೋಪಿಗಳನ್ನು ಬಂಧಿಸುವವರೆಗೆ ಮತ್ತು ಅವರಿಗೆ ಮರಣದಂಡನೆ ವಿಧಿಸುವವರೆಗೆ ಉತ್ತರಕ್ರಿಯೆ  ಮಾಡುವುದಿಲ್ಲ’ ಎಂದು ಮೃತ ದುಲಾರ್ ಚಂದ್ ಯಾದವ್ ಅವರ ಮೊಮ್ಮಗ ಹೇಳಿದ್ದಾರೆ. 

‘ನನ್ನ ತಾತನನ್ನು ವಿರೋಧಿಗಳು, ಆಡಳಿತದ ಸಹಾಯದೊಂದಿಗೆ ಕೊಲೆ ಮಾಡಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ. 

ಶೂನ್ಯ ಸಹನೆ ನೀತಿ’ ಕಾನ್ಪುರ (ಯುಪಿ) (ಪಿಟಿಐ): ‘ಬಿಹಾರದಲ್ಲಿ ಮತದಾರರು ಶಾಂತಿಯುತವಾಗಿ ನಿರ್ಭೀತಿಯಿಂದ ಮತ ಚಲಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ರೀತಿಯ ಚುನಾವಣಾ ಹಿಂಸಾಚಾರವನ್ನು ಸಹಿಸುವುದಿಲ್ಲ. ಶೂನ್ಯ ಸಹನೆ ನೀತಿ ಅನುಸರಿಸಲಾಗುವುದು’ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಹೇಳಿದ್ದಾರೆ. ‘ಈಚೆಗೆ ಮೊಕಾಮಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಾಟ್ನಾದ (ಗ್ರಾಮೀಣ) ಎಸ್‌ಪಿ ಮತ್ತು ಇತರೆ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಅವರು ಹೇಳಿದರು. ‘ಚುನಾವಣಾ ಆಯೋಗಕ್ಕೆ ‘ಪಕ್ಷ’ ಅಥವಾ ‘ವಿಪಕ್ಷ’ ಎಂಬ ತಾರತಮ್ಯವಿಲ್ಲ. ಎಲ್ಲರೂ ನಮ್ಮ ಮುಂದೆ ಸಮಾನರು’ ಎಂದು ಜ್ಞಾನೇಶ್‌ ಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.