ADVERTISEMENT

ಎಲ್ಲರ ದೃಷ್ಟಿ ಬಿಹಾರದತ್ತ: ಪುನಃ ಬಿಜೆಪಿಗೆ ಎದುರಾಳಿಯಾಗುತ್ತಾರೆಯೇ ನಿತೀಶ್‌?

ಪಿಟಿಐ
Published 9 ಆಗಸ್ಟ್ 2022, 3:25 IST
Last Updated 9 ಆಗಸ್ಟ್ 2022, 3:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಬಿಹಾರ ಮುಖ್ಯಮಂತ್ರಿ, ಜೆಡಿಯು ವರಿಷ್ಠ ನಿತೀಶ್‌ ಕುಮಾರ್‌ ಇಂದು ಕರೆದಿರುವ ಶಾಸಕಾಂಗ ಸಭೆಯ ಮೇಲೆಯೇ ಎಲ್ಲರ ಚಿತ್ತ ನೆಟ್ಟಿದೆ. ರಾಜ್ಯದಲ್ಲಿ ಬಿಗಡಾಯಿಸಿರುವ ರಾಜಕೀಯ ಬಿಕ್ಕಟ್ಟು ಯಾವ ಹಂತಕ್ಕೆ ತಲುಪಲಿದೆ ಎಂಬ ಬಗ್ಗೆ ಕುತೂಹಲ ಮನೆಮಾಡಿದೆ.

ನಿತೀಶ್‌ ಕುಮಾರ್ ಅವರಿಗೆ ಆತ್ಮೀಯರಾಗಿ ಗುರುತಿಸಿಕೊಂಡಿರುವ ರಾಜ್ಯ ಸಚಿವ ವಿಜಯ್‌ ಕುಮಾರ್‌ ಚೌದರಿ ಅವರು ಜೆಡಿಯು ಶಾಸಕಾಂಗ ಪಕ್ಷದ ಸಭೆ ಕರೆದಿರುವುದಕ್ಕೆ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್‌ ಅವರು ರಾಜೀನಾಮೆಯತ್ತ ಬೊಟ್ಟು ಮಾಡಿದ್ದಾರೆ.

'ಎನ್‌ಡಿಎನಲ್ಲಿ ಬಿಕ್ಕಟ್ಟು ಉದ್ಭವಿಸಿರುವುದನ್ನು ನಾನು ಗಮನಿಸಿಲ್ಲ. ಸಿಎಂ ನಿತೀಶ್‌ ಕುಮಾರ್‌ ಅವರ ಜನತಾ ದರ್ಬಾರ್‌ ಕಾರ್ಯಕ್ರಮದಲ್ಲಿ ಹಲವು ಬಿಜೆಪಿ ಸಚಿವರು ಉಪಸ್ಥಿತರಿದ್ದರು. ಹಿರಿಯ ಮುಖಂಡ ಆರ್‌ಸಿಪಿ ಸಿಂಗ್‌ ಅವರು ಪಕ್ಷವನ್ನು ತೊರೆದಿದ್ದರ ಬಗ್ಗೆ ಚರ್ಚಿಸಲು ಜೆಡಿಯು ಶಾಸಕಾಂಗ ಸಭೆ ಕರೆಯಲಾಗಿದೆ' ಎಂದು ವಿಜಯ್‌ ಕುಮಾರ್‌ ಚೌದರಿ ತಿಳಿಸಿದ್ದಾರೆ.

ADVERTISEMENT

'ಆರ್‌ಸಿಪಿ ಸಿಂಗ್‌ ಅವರು ದೀರ್ಘಾವಧಿ ಪಕ್ಷದಲ್ಲಿದ್ದ ಹಿರಿಯ ನಾಯಕ. ಖಂಡಿತವಾಗಿಯೂ ಪಕ್ಷದ ಹಲವು ನಾಯಕರ ಜೊತೆ ಉತ್ತಮ ಒಡನಾಟ ಹೊಂದಿರುತ್ತಾರೆ. ಇದೀಗ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಸ್ಪಷ್ಟನೆ ಕೇಳಿದ ವಿಚಾರಕ್ಕೆ ಮುನಿಸಿಕೊಂಡು ರಾಜೀನಾಮೆ ನೀಡಿದ್ದಾರೆ. ಇದನ್ನು ಪಕ್ಷದ ಇತರ ಹಿರಿಯ ಮುಖಂಡರು ಹೇಗೆ ಗ್ರಹಿಸಿದ್ದಾರೆ ಎಂಬ ವಿಚಾರದ ಬಗ್ಗೆ ಮುಕ್ತವಾಗಿ ಚರ್ಚಿಸಬೇಕಿದೆ' ಎಂದು ಮಾಜಿ ವಿಧಾನಸಭೆ ಸ್ಪೀಕರ್‌ ಚೌದರಿ ವಿವರಿಸಿದ್ದಾರೆ. ಇವರು ಪ್ರಸ್ತುತ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾರೆ.

ಆರ್‌ಸಿಪಿ ಸಿಂಗ್‌ ಅವರು ಸುಮಾರು ಮೂರು ದಶಕಗಳ ವರೆಗೆ ನಿತೀಶ್‌ ಕುಮಾರ್‌ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು. ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆ ಸ್ಪಷ್ಟನೆ ನೀಡುವಂತೆ ಆರ್‌ಸಿಪಿ ಸಿಂಗ್‌ ಅವರಿಗೆ ಸೂಚಿಸಲಾಗಿತ್ತು. ಆರ್‌ಸಿಪಿ ಸಿಂಗ್‌ ಅವರನ್ನು 'ಪಕ್ಷಕ್ಕೆ ಕನಿಷ್ಠ ಕೊಡುಗೆ ನೀಡಿದ ವ್ಯಕ್ತಿ' ಎಂದು ಉಲ್ಲೇಖಿಸಿ ಮಾಧ್ಯಮ ಹೇಳಿಕೆಯನ್ನು ಬೇರೆ ರಾಜ್ಯಗಳಲ್ಲಿರುವ ಪಕ್ಷದ ಘಟಕಗಳಿಗೆ ಕಳುಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.