ಭುವನೇಶ್ವರ (ಪಿಟಿಐ): ‘ಬಿಜು ಪಟ್ನಾಯಕ್ ಕ್ರೀಡಾ ಪ್ರಶಸ್ತಿಯ ಹೆಸರನ್ನು ಮರುನಾಮಕರಣ ಮಾಡುವುದಿಲ್ಲ’ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭಾನುವಾರ ತಿಳಿಸಿದ್ದಾರೆ.
ರಾಜ್ಯದ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯು ಶುಕ್ರವಾರ ಪ್ರಶಸ್ತಿಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಪ್ರಶಸ್ತಿಯ ಹೆಸರನ್ನು ‘ರಾಜ್ಯ ಕ್ರೀಡಾ ಸಮ್ಮಾನ್’ ಎಂದು ಮರುನಾಮಕರಣ ಮಾಡಿತ್ತು. ಅದಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
‘ರಾಜ್ಯ ಮತ್ತು ದೇಶಕ್ಕೆ ಬಿಜು ಪಟ್ನಾಯಕ್ ಅವರ ಕೊಡುಗೆ ಸ್ಮರಣೀಯವಾಗಿದೆ. ನನ್ನ ಸರ್ಕಾರವು ಮಣ್ಣಿನ ಮಕ್ಕಳನ್ನು ಗೌರವಿಸುತ್ತದೆ. ಹಾಗಾಗಿ, ಅವರ ಹೆಸರಿನ ಕ್ರೀಡಾ ಪ್ರಶಸ್ತಿಯ ಶೀರ್ಷಿಕೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ’ ಎಂದು ಮಾಝಿ ಹೇಳಿದರು.
ಒಡಿಶಾದಲ್ಲಿ ಈಚೆಗಷ್ಟೇ ಬಿಜೆಪಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಪ್ರಶಸ್ತಿಯ ಹೆಸರನ್ನು ಮರುನಾಮಕರಣ ಮಾಡಿದ್ದನ್ನು ವಿರೋಧಿಸಿ ಬಿಜು ಪಟ್ನಾಯಕ್ ಅವರ ಪುತ್ರ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಪಕ್ಷವು ವಾಗ್ದಾಳಿ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.