ADVERTISEMENT

ಬಿಜು ಪಟ್ನಾಯಕ್ ಅವರ ಡಕೋಟಾ ವಿಮಾನ ಶೀಘ್ರದಲ್ಲೇ ಒಡಿಶಾಗೆ

ಪಿಟಿಐ
Published 2 ಜುಲೈ 2021, 14:44 IST
Last Updated 2 ಜುಲೈ 2021, 14:44 IST
ಬಿಜು ಪಟ್ನಾಯಕ್
ಬಿಜು ಪಟ್ನಾಯಕ್   

ಭುವನೇಶ್ವರ: ಕೋಲ್ಕತ್ತದ ನೇತಾಜಿ ಸುಭಾಸ್ ಚಂದ್ರ ಬೋಸ್ (ಎನ್‌ಎಸ್‌ಸಿಬಿ) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತಿರುವ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ‘ಅಪ್ರತಿಮ ಡಕೋಟಾ ವಿಮಾನ’ವನ್ನು ಭುವನೇಶ್ವರಕ್ಕೆ ಮರಳಿ ತರುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಒಡಿಶಾ ಸರ್ಕಾರ ಶುಕ್ರವಾರ ತಿಳಿಸಿದೆ.

ವಿಮಾನವನ್ನು ಮರಳಿ ತರಲು ರಾಜ್ಯದಾದ್ಯಂತದ ಜನರ ಬೇಡಿಕೆ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು, ಡಕೋಟಾ ಸಾಗಣೆಗೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಟೆಂಡರ್ ಕರೆದಿದೆ ಎಂದು ಒಡಿಶಾ ವಾಣಿಜ್ಯ ಮತ್ತು ಸಾರಿಗೆ ಸಚಿವ ಪದ್ಮನಾಭ ಬೆಹೆರಾ ತಿಳಿಸಿದರು.

ಡಕೋಟಾ ಶೀಘ್ರದಲ್ಲೇ ಭುವನೇಶ್ವರಕ್ಕೆ ಮರಳಲಿದೆ ಎಂದ ಸಚಿವರು, ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಬಿಜು ಪಟ್ನಾಯಕ್‌ ಅವರ ಪ್ರತಿಮೆಯ ಬಳಿ ವಿಮಾನ ಪ್ರದರ್ಶಿಸಲು ಅನುಮತಿ ಕೋರಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.

ADVERTISEMENT

ವಿಮಾನವನ್ನು ಭುವನೇಶ್ವರಕ್ಕೆ ಸ್ಥಳಾಂತರಿಸುವ ಗುತ್ತಿಗೆಯನ್ನುಕೋಲ್ಕತ್ತ ಮೂಲದ ಕಂಪನಿಯೊಂದಕ್ಕೆ ನೀಡಲಾಗಿದೆ. ಕಳಚಿದ ವಿಮಾನವನ್ನು ರಸ್ತೆ ಮೂಲಕ ಭುವನೇಶ್ವರಕ್ಕೆ ತರಲು ಮತ್ತು ಅದನ್ನು ಇಲ್ಲಿನ ವಿಮಾನ ನಿಲ್ದಾಣದ ಆವರಣದಲ್ಲಿ ಮತ್ತೆ ಜೋಡಿಸಲು ಕಂಪನಿಗೆ ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೈಲಟ್ ಆಗಿದ್ದ ಬಿಜು ಪಟ್ನಾಯಕ್, 1947ರಲ್ಲಿ ಇಂಡೋನೇಷ್ಯಾದ ಅಂದಿನ ಪ್ರಧಾನಮಂತ್ರಿ ಸುಲ್ತಾನ್ ಷಹರ್ರಿರ್ ಅವರನ್ನು ಕಾಡಿನ ಅಡಗುತಾಣದಿಂದ ರಕ್ಷಿಸಲು ಸಹಪೈಲಟ್ ಆಗಿದ್ದ ಪತ್ನಿ ಗ್ಯಾನ್‌ ಪಟ್ನಾಯಕ್ ಅವರೊಂದಿಗೆ ಡಕೋಟಾ ವಿಮಾನವನ್ನು ಜಾವಾಕ್ಕೆ ಹಾರಿಸಿದ್ದರು.

ಬಿಜು ಪಟ್ನಾಯಕ್‌ ಅವರ ಶೌರ್ಯಕ್ಕೆ ಕೃತಜ್ಞತೆಯಿಂದ ಇಂಡೋನೇಷ್ಯಾ ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭೂಮಿಪುತ್ರ’ ಪುರಸ್ಕಾರ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.