ADVERTISEMENT

ಕರ್ನೂಲ್ ಬಸ್‌ ದುರಂತ: ಬಸ್‌ ಡಿಕ್ಕಿ ಮುನ್ನವೇ ಬೈಕ್‌ ಸವಾರ ಸಾವು

ಪಿಟಿಐ
Published 25 ಅಕ್ಟೋಬರ್ 2025, 16:08 IST
Last Updated 25 ಅಕ್ಟೋಬರ್ 2025, 16:08 IST
.
.   

ಹೈದರಾಬಾದ್‌: ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಸಂಸ್ಥೆಯ ಸ್ಲೀಪರ್ ಎಸಿ ಬಸ್‌ ಬೆಂಕಿ ಹೊತ್ತಿಕೊಂಡು 19 ಪ್ರಯಾಣಿಕರ ಸಜೀವ ದಹನಕ್ಕೆ ಕಾರಣವಾಗಿದ್ದ ಬೈಕ್‌ ಸವಾರ, ಈ ಅಪಘಾತಕ್ಕೂ ಮೊದಲೇ ‘ಸ್ಕಿಡ್‌’ ಆಗಿ, ಮೃತಪಟ್ಟಿದ್ದ ಎಂಬುದು ಗೊತ್ತಾಗಿದೆ.

ಆ ನಂತರ ಬಸ್‌ ಈ ಬೈಕಿಗೆ ಡಿಕ್ಕಿ ಹೊಡೆದು, ಕೆಲ ದೂರ ಎಳೆದೊಯ್ದಿದೆ. ಅದೇ ವೇಳೆ ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಸೋರಿಕೆಯಾಗಿದೆ. ಈ ಸಂದರ್ಭದಲ್ಲಿ ಆದ ಘರ್ಷಣೆಯಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ವಿವರಿಸಿದ್ದಾರೆ. 

ವಿಭಜಕಕ್ಕೆ ಡಿಕ್ಕಿ:

ಪಲ್ಸರ್‌ ಬೈಕ್‌ನಲ್ಲಿ ಹಿಂಬದಿ ಸವಾರನ ಜತೆಗೆ ಹೋಗುತ್ತಿದ್ದ ಬಿ. ಶಿವಶಂಕರ್‌ (22), ಕರ್ನೂಲ್‌ ಜಿಲ್ಲೆಯ ಚಿನ್ನತೇಕೂರು ಬಳಿ ಹೆದ್ದಾರಿಯಲ್ಲಿ ‘ಸ್ಕಿಡ್‌’ ಆಗಿ, ಹೆದ್ದಾರಿಯ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ವೇಳೆ ಹಿಂಬದಿ ಸವಾರ ಯರ್‍ರಿಸ್ವಾಮಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

‘ದುರಂತದ ಬಳಿಕ ಆತಂಕಗೊಂಡ ಯರ್‍ರಿಸ್ವಾಮಿ ತಮ್ಮ ಗ್ರಾಮವಾದ ತುಗ್ಗಲಿಗೆ ಓಡಿಹೋಗಿದ್ದರು. ಪೆಟ್ರೋಲ್‌ ಬಂಕ್‌ ಒಂದರ ಸಿ.ಸಿ.ಟಿ.ವಿ ದೃಶ್ಯಗಳನ್ನು ಆಧರಿಸಿ, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ವಿಷಯಗಳು ಗೊತ್ತಾಗಿವೆ’ ಎಂದು ಕರ್ನೂಲ್‌ ಎಸ್‌ಪಿ ವಿಕ್ರಾಂತ್ ಪಾಟೀಲ್‌ ತಿಳಿಸಿದ್ದಾರೆ.

‘ಶುಕ್ರವಾರ ಬೆಳಿಗ್ಗೆ 2.24ರ ಸುಮಾರಿಗೆ ಬಂಕ್‌ನಲ್ಲಿ ಪೆಟ್ರೋಲ್‌ ತುಂಬಿಸಿಕೊಳ್ಳಲು ಬೈಕ್‌ ಅನ್ನು ಅವರು ನಿಲ್ಲಿಸಿದ್ದರು. ಅಲ್ಲಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಚಿನ್ನತೇಕೂರು ಬಳಿ ಶಿವಶಂಕರ್‌ ಸ್ಕಿಡ್‌ ಆಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದರು. ಸಣ್ಣಪುಟ್ಟ ಗಾಯಗಳಾಗಿದ್ದ ಯರ್‍ರಿಸ್ವಾಮಿ ಅವರು, ಶಿವಶಂಕರ್‌ ದೇಹವನ್ನು ಸ್ವಲ್ಪ ದೂರ ಎಳೆದು ಉಸಿರಾಟ ಪರಿಶೀಲಿಸಿದರು. ಉಸಿರಾಟ ನಿಂತಿರುವುದನ್ನು ಖಚಿತಪಡಿಸಿಕೊಂಡ ಅವರು, ಬೈಕ್‌ ಅನ್ನು ಪಕ್ಕಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಾಗ ದಿಢೀರನೇ ಬಸ್‌ ಬಂದು ಡಿಕ್ಕಿ ಹೊಡೆದಿದೆ. ಅದು ಬೈಕ್‌ ಅನ್ನು ಸ್ವಲ್ಪ ದೂರ ಎಳೆದೊಯ್ದಿದೆ’ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.  

ಬಸ್ಸಿನ ಕೆಳಗೆ ಬೆಂಕಿ ಕಾಣಸಿಕೊಂಡಿದ್ದರಿಂದ ಆತಂಕಗೊಂಡ ಯರ್‍ರಿಸ್ವಾಮಿ ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ಅವರು ಹೇಳಿದ್ದಾರೆ. 

ಬಸ್‌ ಬೆಂಕಿಗೆ ಆಹುತಿಯಾದ ಸ್ಥಳದಿಂದ ಸುಮಾರು 200ರಿಂದ 300 ಮೀಟರ್‌ ದೂರದಲ್ಲಿ ಶಿವಶಂಕರ್‌ ಮೃತದೇಹ ಪತ್ತೆಯಾಗಿದೆ. ಈ ಸ್ಥಳವನ್ನು ರಸ್ತೆ ಸಾರಿಗೆ ಪ್ರಾಧಿಕಾರ ಮತ್ತು ಪೊಲೀಸ್‌ ತಂಡಗಳು ಶನಿವಾರ ಪರಿಶೀಲನೆ ನಡೆಸಿದವು. ಬೈಕ್‌ ವಿಭಜಕಕ್ಕೆ ಡಿಕ್ಕಿ ಹೊಡೆದ ಸ್ಥಳದಲ್ಲಿನ ಕುರುಹುಗಳ ಶೋಧವನ್ನೂ ಈ ತಂಡದವರು ಪರಿಶೀಲಿಸಿದರು.

ಸುರಕ್ಷಾ ಮಾನದಂಡಗಳ ಉಲ್ಲಂಘನೆ

ಬೆಂಕಿ ಅಪಘಾತಕ್ಕೀಡಾದ ವಿ. ಕಾವೇರಿ ಟ್ರಾವೆಲ್ಸ್‌ನ ಎಸಿ ಸ್ಲೀಪರ್‌ ಬಸ್‌ ಹಲವು ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಸಿರುವುದು ಆರಂಭಿಕ ತಪಾಸಣೆ ವೇಳೆ ಗೊತ್ತಾಗಿದೆ ಎಂದು ಆಂಧ್ರ ಪ್ರದೇಶ ರಸ್ತೆ ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಅಧಿಕಾರಿಗಳು ತಿಳಿಸಿದ್ದಾರೆ. 

‘ಈ ಬಸ್‌ ಅನ್ನು ಸ್ಲೀಪರ್‌ ಕೋಚ್‌ ಆಗಿ ಪರಿವರ್ತಿಸಲಾಗಿದೆ. ಅದರೆ ಪರಿವರ್ತನೆಗಾಗಿ ಅನುಮೋದನೆ ಪಡೆದಿಲ್ಲ’ ಎಂದು ಅವರು ಹೇಳಿದ್ದಾರೆ.    ವಾಹನ ನಿರ್ಮಾಣ ಅಗ್ನಿ ಸುರಕ್ಷತೆ ತುರ್ತು ನಿರ್ಗಮನ ಮತ್ತು ಒಳಗಾಂಣ ವಸ್ತುಗಳ ಬಳಕೆ ಸೇರಿದಂತೆ ಒಟ್ಟಾರೆ ರಚನೆಯಲ್ಲಿ ಹಲವು ಮಹತ್ವದ ಸುರಕ್ಷತಾ ಮಾರ್ಗಸೂಚಿಗಳ ಪಾಲನೆ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ. 

ಅಗ್ನಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆ ಸಹ ಈ ಬಸ್‌ನಲ್ಲಿ ಇರಲಿಲ್ಲ. ಒಳಾಂಗಣದಲ್ಲಿ ಬಳಸುವ ಪರದೆಗಳು ಕುಶನ್‌ಗಳು ದಿಂಬುಗಳು ಅಗ್ನಿ ನಿರೋಧಕ ಆಗಿರಬೇಕು. ಆದರೆ ಬಸ್‌ನಲ್ಲಿ ಇದ್ದ ಈ ವಸ್ತುಗಳು ಹೆಚ್ಚು ದಹನಕಾರಿ ಆಗಿದ್ದವು ಎಂದು ಅವರು ಹೇಳಿದ್ದಾರೆ. ಕಿಟಕಿಗಳನ್ನು ಒಡೆಯಲು ವಿನ್ಯಾಸಗೊಳಿಸಲಾದ ಮಿನಿ ಸುತ್ತಿಗೆಯಂತಹ ಉಪಕರಣಗಳು ಬಸ್‌ ಒಳಗೆ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಇರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.  

ದಮನ್‌– ದಿಯುನಲ್ಲಿ ನೋಂದಣಿ:

‘ವಿ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಈ ಬಸ್‌ ಆಂಧ್ರ ಪ್ರದೇಶದಲ್ಲಿ ನೋಂದಣಿಯಾಗಿಲ್ಲ ಅದು ದಮನ್‌ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದಲ್ಲಿ ನೋಂದಣಿಯಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.  ಅಖಿಲ ಭಾರತ ಪರವಾನಗಿ ಹೊಂದಿರುವ ಈ ಬಸ್‌ ಆಂಧ್ರದಲ್ಲಿ ವ್ಯವಹಾರಿಸುತ್ತಿತ್ತು ಎಂಬುದು ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ. ಈ ಬಸ್‌ನ ಅಖಿಲ ಭಾರತ ಪರವಾನಗಿ ಸಾರಿಗೆ ಪರವಾನಗಿ ವಿಮೆ ಮತ್ತು ಇತರ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  

ತೀವ್ರತೆ ಹೆಚ್ಚಿಸಿದ ಮೊಬೈಲ್‌ ಬ್ಯಾಟರಿಗಳು

ಬಸ್ಸಿನ ಲಗೇಜ್‌ ಕಪಾಟಿನ ಪೆಟ್ಟಿಗೆಯಲ್ಲಿದ್ದ ಹಲವು ಸ್ಮಾರ್ಟ್‌ ಫೋನ್‌ಗಳು ಬೆಂಕಿಗೆ ಆಹುತಿಯಾಗಿವೆ. ಅವುಗಳ ಲೀಥಿಯಂ–ಅಯಾನ್‌ ಬ್ಯಾಟರಿಗಳೂ ಸ್ಫೋಟಿಸಿರುವುದರಿಂದ ದುರಂತದ ತೀವ್ರತೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

  ₹46 ಲಕ್ಷ ಮೌಲ್ಯದ 234 ಸ್ಮಾರ್ಟ್‌ ಫೋನ್‌ಗಳನ್ನು ಹೈದರಾಬಾದ್ ಮೂಲದ ಉದ್ಯಮಿ ಮಂಗನಾಥ್‌ ಎಂಬುವರು ಪಾರ್ಸೆಲ್‌ ಕಳುಹಿಸಿದ್ದರು. ಅದನ್ನು ಬೆಂಗಳೂರಿನ ಇ–ಕಾರ್ಮರ್ಸ್‌ ಕಂಪನಿಗೆ ಕಳುಹಿಸಲಾಗುತ್ತಿತ್ತು. ಅಲ್ಲಿಂದ ಅದು ಗ್ರಾಹಕರಿಗೆ ಸರಬರಾಜು ಆಗಬೇಕಿತ್ತು ಎಂದು ಮೂಲಗಳು ತಿಳಿಸಿವೆ. ‘ಬಸ್ಸಿನಲ್ಲಿ ಸುಟ್ಟುಹೋಗದೇ ಉಳಿದಿದ್ದ ಕೆಲ ಮೊಬೈಲ್‌ ಫೋನ್‌ಗಳನ್ನೂ ಗಮನಿಸಿದ್ದೇನೆ’ ಎಂದು ಕರ್ನೂಲ್‌ ಜಿಲ್ಲಾಧಿಕಾರಿ ಸಿರಿ ಹೇಳಿದ್ದಾರೆ. ‘ಬಸ್‌ನ ಬ್ಯಾಟರಿಗಳು ಎಸಿ ಬ್ಯಾಟರಿಗಳು ಮತ್ತು ಬಸ್‌ನಲ್ಲಿನ ಸುಡುವ ಪೀಠೋಪಕರಣ ಬೆಂಕಿ ಕೆನ್ನಾಲಗೆಯನ್ನು ಹೆಚ್ಚಿಸುವಂತೆ ಮಾಡಿವೆ’ ಎಂದು ಕರ್ನೂಲ್‌ನ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಾಂತ್‌ ಪಾಟೀಲ್‌ ಮಾಹಿತಿ ನೀಡಿದ್ದಾರೆ. 

ಡಿಎನ್‌ಎ ಪರೀಕ್ಷೆ 27ಕ್ಕೆ ಮುಗಿಯಲಿದೆ

ಆಂಧ್ರ ಪ್ರದೇಶದಲ್ಲಿ ಸಂಭವಿಸಿದ ಬಸ್‌ ಬೆಂಕಿ ಅಪಘಾತದಲ್ಲಿ ಸುಟ್ಟು ಕರಕಲಾದ ದೇಹಗಳ ಡಿಎನ್‌ಎ ಪರೀಕ್ಷೆಗೆ 48 ಗಂಟೆಗಳು ಬೇಕಿದ್ದು ಇದೇ 27ರೊಳಗೆ (ಸೋಮವಾರ) ಪೂರ್ಣಗೊಳ್ಳಬಹುದು ಎಂದು ಕರ್ನೂಲ್‌ ಜಿಲ್ಲಾಧಿಕಾರಿ ಎ. ಸಿರಿ ಶನಿವಾರ ತಿಳಿಸಿದರು. 

ಡಿಎನ್‌ಎ ಫಲಿತಾಂಶಗಳು ಬಂದ ಬಳಿಕ ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು.  ಶವಗಳನ್ನು ಅವರ ಊರುಗಳಿಗೆ ಸಾಗಿಸಲು ಆಂಬುಲೆನ್ಸ್‌ ಮತ್ತು ಇತರ ವಾಹನಗಳ ವ್ಯವಸ್ಥೆಯನ್ನೂ ಆ ದಿನ ಮಾಡಲಾಗುವುದು ಎಂದು ಅವರು ಹೇಳಿದರು.

ಈ ದುರಂತದಲ್ಲಿ ಮೃತಪಟ್ಟವರ ಶವಗಳನ್ನು ಕರ್ನೂಲ್‌ನ ಸರ್ಕಾರಿ ಜನರಲ್‌ ಆಸ್ಪತ್ರೆಯಲ್ಲಿ ಸಂರಕ್ಷಿಸಿಡಲಾಗಿದೆ. ಶವಗಳ ಮಾದರಿಗಳನ್ನು ಸಂಗ್ರಹಿಸಿ ವಿಜಯವಾಡದ ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ ಎಂದು ಅವರು ವಿವರಿಸಿದರು.

‘ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಡಿಎನ್‌ಎ ಪರೀಕ್ಷೆ ಮಾಡದೆ ಅವುಗಳನ್ನು ಸರಿಯಾಗಿ ಗುರುತಿಸಲು ಆಗುವುದಿಲ್ಲ’ ಎಂದು ಅವರು ತಿಳಿಸಿದರು.  ಕರ್ನೂಲ್‌ ಜಿಲ್ಲೆಯ ಚಿನ್ನತೇಕೂರು ಗ್ರಾಮದ ಬಳಿ ಶುಕ್ರವಾರ ನಸುಕಿನ ವೇಳೆಯಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿತ್ತು. ಬಸ್‌ಗೆ ಬೆಂಕಿ ಹೊತ್ತುಕೊಂಡು ಉರಿದಿದ್ದರಿಂದ 19 ಪ್ರಯಾಣಿಕರು ಸಜೀವ ದಹನಗೊಂಡರು. ಬಸ್‌ನಲ್ಲಿ ಒಟ್ಟು 44 ಪ್ರಯಾಣಿಕರಿದ್ದರು. ಈ ಪೈಕಿ ಹಲವರು ಪಾರಾಗಿದ್ದಾರೆ.   ದುರಂತದಲ್ಲಿ ಮೃತಪಟ್ಟವರ ಪೈಕಿ 16 ಜನರ ಸಂಬಂಧಿಕರು ಡಿಎನ್‌ಎ ಪರೀಕ್ಷೆಗೆ ತಮ್ಮ ಮಾದರಿಗಳನ್ನು ನೀಡಿದ್ದಾರೆ. ಇನ್ನೂ ಕೆಲವರು ಶೀಘ್ರದಲ್ಲಿಯೇ ನೀಡಲಿದ್ದಾರೆ ಎಂದು ಅವರು ಹೇಳಿದರು. 

ತಪಾಸಣೆ: ಒಂದು ಬಸ್‌ ವಶಕ್ಕೆ

ಕರ್ನೂಲ್‌ ಜಿಲ್ಲೆಯ ಚಿನ್ನತೇಕೂರು ಬಳಿ ಸಂಭವಿಸಿದ ಬಸ್‌ ಅಪಘಾತದಿಂದ ಎಚ್ಚೆತ್ತುಕೊಂಡಿರುವ ತೆಲಂಗಾಣ ಸಾರಿಗೆ ಇಲಾಖೆ ಅಧಿಕಾರಿಗಳು ಹಲವು ಖಾಸಗಿ ಬಸ್‌ಗಳನ್ನು ಪರಿಶೀಲಿಸಿದರು. ಈ ವೇಳೆ ನಿಯಮಗಳನ್ನು ಉಲ್ಲಂಘಿಸಿದ್ದ ಒಂದು ಬಸ್‌ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.  ಹೈದರಾಬಾದ್‌ ಪ್ರವೇಶಿಸುವ ಬಸ್‌ಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಶನಿವಾರ ಬೆಳಿಗ್ಗೆ ಒಟ್ಟು 54 ವಾಹನಗಳ ತಪಾಸಣೆ ನಡೆಸಿದರು.  

ಅಗ್ನಿಶಾಮಕ ಉಪಕರಣಗಳ ಅನುಪಸ್ಥಿತಿ ತೆರಿಗೆ ಪಾವತಿಸದಿರುವುದು ಸರಕುಗಳನ್ನು ಸಾಗಿಸಲು ಬಳಸುವುದೂ ಸೇರಿದಂತೆ ಬಹು ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಒಂದು ಖಾಸಗಿ ಬಸ್‌ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ.    ಹೈದರಾಬಾದ್‌ನಿಂದ ನಿತ್ಯ ಸುಮಾರು 500 ಅಂತರರಾಜ್ಯ ಖಾಸಗಿ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು ಸಾರಿಗೆ ಮತ್ತು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಾಹನಗಳ ಮಾಲೀಕರು ಮತ್ತು ಚಾಲಕರಿಗೆ ಸೂಚಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.