ADVERTISEMENT

ಪರಿಶಿಷ್ಟ ಪಂಗಡಕ್ಕೆ ಸಿದ್ದಿ, ತಳವಾರ, ಪರಿವಾರ: ಆದೇಶ ಮಸೂದೆಗೆ ಲೋಕಸಭೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 18:59 IST
Last Updated 11 ಫೆಬ್ರುವರಿ 2020, 18:59 IST
ಅಧಿವೇಶನ
ಅಧಿವೇಶನ   

ನವದೆಹಲಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ‘ಪರಿವಾರ’, ‘ತಳವಾರ’ ಮತ್ತು ‘ಸಿದ್ದಿ’ ಸಮುದಾಯದ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂವಿಧಾನದ (ಪರಿಶಿಷ್ಟ ಪಂಗಡ) ಆದೇಶ (2ನೇ ತಿದ್ದುಪಡಿ) ಮಸೂದೆಗೆ ಮಂಗಳವಾರ ಲೋಕಸಭೆಯ ಅಂಗೀಕಾರ ದೊರೆಯಿತು.

ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿತ್ತು.

ಕರ್ನಾಟಕದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿರುವ ‘ತಳವಾರ’, ‘ಪರಿವಾರ’ ಸಮುದಾಯ ಹಾಗೂ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಸಿದ್ದಿ ಸಮುದಾಯದ ಜನರಿಗೆ ಪರಿಶಿಷ್ಟ ಪಂಗಡದ ಸೌಲಭ್ಯಗಳು ದೊರೆಯಲು ಈ ಮಸೂದೆ ನೆರವಾಗಲಿದೆ.

ADVERTISEMENT

ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್‌ ಮುಂಡಾ ಅವರು ಮಸೂದೆ ಮಂಡಿಸಿದರು. ವಿಪಕ್ಷಗಳ ಸದಸ್ಯರೂ ಮಸೂದೆಯನ್ನು ಸ್ವಾಗತಿಸಿದರು.

ಪ್ರಸಕ್ತ ಸಾಲಿನ ಬಜೆಟ್‌ ಅಧಿವೇಶನದ ಮೊದಲ ಹಂತದ ಕೊನೆಯ ದಿನ ಈ ಮಸೂದೆಗೆ ಅಂಗೀಕಾರ ದೊರೆತಿದ್ದು, ಇನ್ನು ರಾಷ್ಟ್ರಪತಿಯವರ ಅನುಮೋದನೆ ಬಾಕಿ ಇದೆ.

ಮಸೂದೆ ಕುರಿತು ಮಾತನಾಡಿದ ಬಿಜೆಪಿ ಸದಸ್ಯ ಪ್ರತಾಪ ಸಿಂಹ, ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಈ ಸಮುದಾಯದ ಜನರು 36 ವರ್ಷಗಳಿಂದ ಹೋರಾಟ ನಡೆಸಿ ಸಲ್ಲಿಸಿದ್ದ ಬೇಡಿಕೆ ಇದೀಗ ಈಡೇರುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಾಜ್ಯದ ಸಚಿವ ಸಂಪುಟದ ಒಪ್ಪಿಗೆ ನೀಡಿ ಸಂಸತ್‌ಗೆ ಕಳುಹಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದರೆಲ್ಲರೂ ಅಭಿನಂದನೆಗೆ ಅರ್ಹರು ಎಂದು ಹೇಳಿದರು.

ವಿವಿಧ ಪಕ್ಷಗಳ ಸದಸ್ಯರಾದ ಸುಪ್ರಿಯಾ ಸುಳೆ, ಪ್ರೊ.ಸೌಗತ್‌ ರಾಯ್‌, ನಿಶಿಕಾಂತ್‌ ದುಬೆ, ಎನ್‌.ಕೆ. ಪ್ರೇಮಚಂದ್ರನ್‌, ಅರವಿಂದ ಸಾವಂತ್‌, ಎನ್‌.ರೆಡ್ಡೆಪ್ಪ, ಸಪ್ತಗಿರಿ ಶಂಕರ್‌, ಕೆ.ಸುರೇಶ್‌, ರವೀಂದ್ರ ಕುಶ್ವಾಹಾ, ದಾನಿಶ್‌ ಅಲಿ, ಸುರೇಶಕುಮಾರ್‌ ಕಶ್ಯಪ್‌, ಅನುಭವ್‌ ಮೊಹಾಂತಿ ಮತ್ತಿತರರು ಮಸೂದೆ ಮೇಲಿನ ಚರ್ಚೆಯ ವೇಳೆ ಮಾತನಾಡಿ, ವಿವಿಧ ರಾಜ್ಯಗಳಲ್ಲಿ ಬೇರೆ ಹೆಸರುಗಳಿಂದ ಕರೆಯಲಾಗುವ ಇದೇ ಸಮುದಾಯದವರನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.