ADVERTISEMENT

ಕೊನೆಗೊಳ್ಳಲಿದೆ ಲೋಕಸಭೆ ಅವಧಿ: ಬಾಕಿ ಉಳಿದ ನಾಲ್ಕು ಮಸೂದೆಗಳು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 15:12 IST
Last Updated 11 ಫೆಬ್ರುವರಿ 2024, 15:12 IST
<div class="paragraphs"><p>ಲೋಕಸಭೆ</p></div>

ಲೋಕಸಭೆ

   

ನವದೆಹಲಿ: ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು 18ರ ಬದಲು 21ಕ್ಕೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಎರಡು ವರ್ಷಗಳು ಕಳೆದಿವೆ. ಆದರೆ ಮಸೂದೆಗೆ ಅನುಮೋದನೆ ಸಿಕ್ಕಿಲ್ಲ. ಈಗ ಪ್ರಸಕ್ತ ಲೋಕಸಭೆಯ ಅವಧಿ ಕೊನೆಗೊಳ್ಳುತ್ತಿರುವ ಕಾರಣ, ಈ ಮಸೂದೆಯನ್ನು ಹೊಸ ಲೋಕಸಭೆಯಲ್ಲಿ ಪುನಃ ಮಂಡಿಸಬೇಕಾಗುತ್ತದೆ.

ಈ ಮಸೂದೆ ಸೇರಿ ಒಟ್ಟು ನಾಲ್ಕು ಮಸೂದೆಗಳಿಗೆ ಇದೇ ಗತಿ ಒದಗಿದೆ. ವಿವಾದಿತ ‘ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ’, ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ, ಕಲ್ಯಾಣ (ತಿದ್ದುಪಡಿ) ಮಸೂದೆ’, ‘ಅಂತರರಾಜ್ಯ ನದಿ ನೀರು ವ್ಯಾಜ್ಯಗಳ (ತಿದ್ದುಪಡಿ) ಮಸೂದೆ’ಯನ್ನು ಕೂಡ ಹೊಸದಾಗಿ ಅಸ್ತಿತ್ವಕ್ಕೆ ಬರುವ ಲೋಕಸಭೆಯಲ್ಲಿ ಹೊಸದಾಗಿ ಮಂಡಿಸಬೇಕಾಗುತ್ತದೆ.

ADVERTISEMENT

ಲೋಕಸಭೆಯಲ್ಲಿ ಮಂಡನೆಯಾದ ಮಸೂದೆಗಳಿಗೆ ಲೋಕಸಭೆಯಲ್ಲಿ ಅಥವಾ ರಾಜ್ಯಸಭೆಯಲ್ಲಿ ಅಂಗೀಕಾರ ಬಾಕಿ ಉಳಿದಿದ್ದರೆ, ಲೋಕಸಭೆಯ ಅವಧಿ ಕೊನೆಗೊಳ್ಳುವಾಗ ಇಂತಹ ಮಸೂದೆಗಳ ಅವಧಿಯೂ ಕೊನೆಗೊಳ್ಳುತ್ತದೆ. ಮಂಡನೆಯಾದ ಮಸೂದೆಗಳ ಪೈಕಿ 20 ಮಸೂದೆಗಳನ್ನು ಹಿಂಪಡೆಯಲಾಯಿತು, ಶೇಕಡ 16ರಷ್ಟು ಮಸೂದೆಗಳನ್ನು ವಿಸ್ತೃತ ಪರಿಶೀಲನೆಗಾಗಿ ಸಮಿತಿಗಳಿಗೆ ವಹಿಸಲಾಯಿತು ಎಂದು ಪಿಆರ್‌ಎಸ್‌ ಸಂಸ್ಥೆಯ ಅಧ್ಯಯನವು ಹೇಳಿದೆ. ಹೀಗೆ ಸಮಿತಿಗಳ ಪರಿಶೀಲನೆಗೆ ವರ್ಗಾವಣೆ ಆದ ಮಸೂದೆಗಳ ಪ್ರಮಾಣವು ಹಿಂದಿನ ಮೂರು ಲೋಕಸಭೆಗಳ ಅವಧಿಯಲ್ಲಿ ವರ್ಗಾವಣೆ ಆಗಿದ್ದ ಮಸೂದೆಗಳ ಪ್ರಮಾಣಕ್ಕೆ ಹೋಲಿಸಿದರೆ ಕಡಿಮೆ.

ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಹೆಚ್ಚು ಮಾಡುವ ಪ್ರಸ್ತಾವ ಇರುವ ಮಸೂದೆಯನ್ನು ಸ್ಥಾಯಿ ಸಮಿತಿಗೆ ವಹಿಸಲಾಗಿದೆ. ಈ ಸಮಿತಿಯ ಅವಧಿಯನ್ನು ಜನವರಿ 24ರಂದು ನಾಲ್ಕು ತಿಂಗಳ ಅವಧಿಗೆ ವಿಸ್ತರಿಸಲಾಯಿತು. ಇದು ಏಳನೆಯ ಅವಧಿ ವಿಸ್ತರಣೆ. ಬಜೆಟ್ ಅಧಿವೇಶನದಲ್ಲಿ ಈ ಮಸೂದೆಯು ಸಂಸತ್ತಿನ ಅಂಗೀಕಾರ ಪಡೆಯುವುದಿಲ್ಲ ಎಂದು ಆಗಲೇ ಗೊತ್ತಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಮಸೂದೆಯನ್ನು ಮಂಡಿಸಿದ್ದರು. 

ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆಯನ್ನು ಹಲವು ರಾಜ್ಯಗಳು ವಿರೋಧಿಸಿದ್ದವು. ಇದಕ್ಕೆ ಸಂಸತ್ತಿನ ಅಂಗೀಕಾರ ಪಡೆಯುವ ಮೊದಲು ಸಂಬಂಧಪಟ್ಟ ಎಲ್ಲರ ಸಮ್ಮತಿ ಪಡೆಯಲು ಕೇಂದ್ರ ಸರ್ಕಾರ ಮುಂದಾದ ಕಾರಣ ಮಸೂದೆಗೆ ಅಂಗೀಕಾರ ಸಿಗಲಿಲ್ಲ. ಅಂತರರಾಜ್ಯ ನದಿ ನೀರು ವಿವಾದಗಳ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದ್ದರೂ, ರಾಜ್ಯಸಭೆಯ ಅಂಗೀಕಾರ ದೊರೆತಿರಲಿಲ್ಲ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.