ADVERTISEMENT

ನಿಷಾದ್‌ ಪಾರ್ಟಿ ಜೊತೆ ಬಿಜೆಪಿ ಮೈತ್ರಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 19:15 IST
Last Updated 30 ಮಾರ್ಚ್ 2019, 19:15 IST

ಲಖನೌ: ಎಸ್‌ಪಿ–ಬಿಎಸ್‌‍ಪಿ– ಆರ್‌ಎಲ್‌ಡಿಗಳ ಮೈತ್ರಿಯಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಬಿಜೆಪಿ, ಉತ್ತರ ಪ್ರದೇಶದಲ್ಲಿ ಜಾತಿ ಆಧಾರಿತ ಸಣ್ಣ ಪ್ರಾದೇಶಿಕ ಪಕ್ಷಗಳ ಜೊತೆ ಕೈಜೋಡಿಸಲು ಮುಂದಾಗುತ್ತಿದೆ.

ಮೀನುಗಾರರ ಪಕ್ಷವಾಗಿರುವ ‘ನಿಷಾದ್‌ ಪಾರ್ಟಿ’ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದ್ದು, ಆ ಪಕ್ಷಕ್ಕೆ ಎರಡು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲು ಮುಂದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶ ವಿಧಾನಸಭೆಗೆ ಕಳೆದ ಬಾರಿ ನಡೆದ ಉಪಚುನಾವಣೆಯಲ್ಲಿ ನಿಷಾದ ಪಾರ್ಟಿಯು ಸಮಾಜವಾದಿ ಪಕ್ಷವನ್ನು ಬೆಂಬಲಿಸಿತ್ತು. ಆ ಪಕ್ಷದ ಅಭ್ಯರ್ಥಿ ಪ್ರವೀಣ್‌ ನಿಷಾದ್‌, ಮುಖ್ಯಮಂತ್ರಿ ಆದಿತ್ಯನಾಥ ಅವರ ತವರು ಗೋರಖ್‌ಪುರದಲ್ಲಿ ಬಿಜೆಪಿಯ ಅಭ್ಯರ್ಥಿಗೆ ಸೋಲಿನ ಕಹಿ ಉಣಿಸಿದ್ದರು. ಈ ಬಾರಿಯೂ ಸಮಾಜವಾದಿ ಪಕ್ಷ ಆ ಕ್ಷೇತ್ರದಿಂದ ಪ್ರವೀಣ್‌ಗೆ ಟಿಕೆಟ್‌ ನೀಡುವುದು ನಿರೀಕ್ಷಿತವಾಗಿತ್ತು. ಅದರಂತೆ, ಮೂರು ದಿನಗಳ ಹಿಂದೆಯಷ್ಟೇ ನಿಷಾದ್‌ ಪಾರ್ಟಿ ಎಸ್‌ಪಿಗೆ ಬೆಂಬಲವನ್ನೂ ಸೂಚಿಸಿತ್ತು.

ADVERTISEMENT

ಆದರೆ ಪ್ರವೀಣ ಅವರ ತಂದೆ, ಪಕ್ಷದ ಅಧ್ಯಕ್ಷರೂ ಆಗಿರುವ ಸಂಜಯ್‌ ನಿಷಾದ್‌ ಅವರು ಶುಕ್ರವಾರ ಮುಖ್ಯಮಂತ್ರಿ ಆದಿತ್ಯನಾಥ ಅವರನ್ನು ಭೇಟಿಮಾಡಿದ್ದರು. ನಂತರ ತಾನು ಎಸ್‌ಪಿ ಜೊತೆಗಿನ ಮೈತ್ರಿಯನ್ನು ರದ್ದುಮಾಡಿದ್ದು, ಬಿಜೆಪಿ ಜೊತೆ ಸೇರಿ ಚುನಾವಣೆ ಎದುರಿಸುವುದಾಗಿ ಘೋಷಿಸಿದರು. ಗೋರಖ್‌ಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಷಾದ್‌ ಸಮುದಾಯದ ಸುಮಾರು ನಾಲ್ಕು ಲಕ್ಷ ಜನರಿದ್ದಾರೆ.

‘ಎಸ್‌ಪಿ– ಬಿಎಸ್‌ಪಿ– ಆರ್‌ಎಲ್‌ಡಿ ಮೈತ್ರಿಯನ್ನು ಸಮರ್ಥವಾಗಿ ಎದುರಿಸಲು ಬಿಜೆಪಿ ಸಣ್ಣ ಪಕ್ಷಗಳ ಜೊತೆ ಕೈಜೋಡಿಸುವುದು ಅಗತ್ಯ’ ಎಂದು ರಾಜ್ಯದ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ರಾಮ ಭುಆಲ್‌ಗೆ ಎಸ್‌ಪಿ ಟಿಕೆಟ್‌

ನಿಷಾದ್‌ ಪಕ್ಷವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ವಿಚಾರ ತಿಳಿಯುತ್ತಿದ್ದಂತೆಯೆ ಸಮಾಜವಾದಿ ಪಕ್ಷವು ಪ್ರವೀಣ್‌ ನಿಷಾದ್‌ ಹೆಸರನ್ನು ರದ್ದುಮಾಡಿ ಗೋರಖ್‌ಪುರ ಕ್ಷೇತ್ರಕ್ಕೆ ರಾಮ ಭುಆಲ್‌ ನಿಷಾದ್‌ ಅವರ ಹೆಸರನ್ನು ಘೋಷಿಸಿದೆ. ಬಿಜೆಪಿ ಈವರೆಗೆ ಅಧಿಕೃತ ಘೋಷಣೆಯನ್ನೇನೂ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.