ADVERTISEMENT

ಒಡಿಶಾದಲ್ಲಿ ಆರಂಭವಾಗುತ್ತಿದೆ ನವೀನಿಸಂ: ಏನಿದರ ಹಕೀಕತ್ತು?

ಪಿಟಿಐ
Published 16 ಅಕ್ಟೋಬರ್ 2022, 7:15 IST
Last Updated 16 ಅಕ್ಟೋಬರ್ 2022, 7:15 IST
ನವೀನ್ ಪಟ್ನಾಯಿಕ್
ನವೀನ್ ಪಟ್ನಾಯಿಕ್   

ಭುವನೇಶ್ವರ್: ನಕ್ಸಲ್ ಚಟುವಟಿಕೆಗೆ ಹೆಸರಾಗಿರುವ ಹಾಗೂ ಸಿಎಂ ನವೀನ್ ಪಟ್ನಾಯಿಕ್ ಅವರ ಸತತ 22 ವರ್ಷದ ಆಡಳಿತಕ್ಕೆ ಸಾಕ್ಷಿಯಾಗಿರುವ ಒಡಿಶಾ ರಾಜ್ಯದಲ್ಲಿ ಇದೀಗ ಹೊಸ ‘ಇಸಂ‘ ಶುರುವಾಗಿದೆ.

ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳ ಟೀಕೆಯನ್ನು ಸಮರ್ಥವಾಗಿ ಎದುರಿಸಲು ಒಡಿಶಾದ ಆಡಳಿತಾರೂಢ ಬಿಜೆಡಿ ನಾಯಕರು ‘ನವೀನಿಸಂ‘ ಆರಂಭಿಸಲು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

ಹೌದು, ಇತ್ತೀಚೆಗೆ ಒಡಿಶಾ ಭೇಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ‘ಬಿಜೆಡಿ ಕೊಲೆಗಡುಕರಿಗೆ, ಭ್ರಷ್ಟಾಚಾರಿಗಳಿಗೆ ರಕ್ಷಣೆ ಕೊಟ್ಟಿದೆ. ಸಿಎಂ ಸೇರಿದಂತೆ ಯಾರೂ ಇದರ ಬಗ್ಗೆ ತುಟಿ ಪಿಟಿಕ್ ಎನ್ನುತ್ತಿಲ್ಲ’ ಎಂದು ಆರೋಪಿಸಿದ್ದರು. ಅಲ್ಲದೇ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಅನೇಕ ಬಿಜೆಪಿ ನಾಯಕರು ಬಿಜೆಡಿಯ ವಿರುದ್ಧ ಮುಗಿಬೀಳುತ್ತಿದ್ದಾರೆ.

ADVERTISEMENT

ಆದರೆ, ಬಿಜೆಪಿ ತಂತ್ರಕ್ಕೆ ವಿನೂತನವಾಗಿ ಟಕ್ಕರ್ ಕೊಡಲು ಮುಂದಾಗಿರುವ ಬಿಜೆಡಿ ನಾಯಕರು, ‘ಮಾತು ಕಡಿಮೆ, ಹೆಚ್ಚು ಕೆಲಸ’ ಎಂಬ ತಂತ್ರದ ಮೂಲಕ ಬಿಜೆಪಿ ಎದುರಿಸಲು ಸಿದ್ಧರಾಗಿದ್ದಾರೆ. ಇಂದು (ಅ.16) ಸಿಎಂ ನವೀನ್ ಪಟ್ನಾಯಿಕ್ ಅವರ 76ನೇ ಜನ್ಮದಿನ ಇರುವುದರಿಂದ ‘ಇಂದಿನಿಂದ ನಾವು ನವೀನಿಸಂ ಆರಂಭಿಸುತ್ತಿದ್ದೇವೆ’ ಎಂದು ಬಿಜೆಡಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಣಬ್ ಪ್ರಕಾಶ್ ದಾಸ್ ತಿಳಿಸಿದ್ದಾರೆ.

‘ನವೀನಿಸಂ ಎಂದರೆ ಅತ್ಯುನ್ನತ ಸಹಿಷ್ಣುತೆ, ಕೆಲಸದಲ್ಲಿ ಸಮರ್ಪಣಾಭಾವ, ಮಾತು ಕಡಿಮೆ, ಕೆಲಸ ಹೆಚ್ಚು. ಅನವಶ್ಯಕವಾಗಿ ವಿರೋಧ ಪಕ್ಷಗಳ ಜೊತೆ ವಾಚಾಳಿತನವನ್ನು ನಡೆಸುವುದಿಲ್ಲ’ ಎಂದು ದಾಸ್ ಹೇಳಿದ್ದಾರೆ.

‘ಅವರು (ಬಿಜೆಪಿ) ನಮ್ಮನ್ನು ಕೆರಳಿಸುವ ರೀತಿ ಮಾಡುತ್ತಾರೆ. ಆದರೆ, ನಮ್ಮ ನಾಯಕರು ಶಾಂತಚಿತ್ತರಾಗಿ ಕೆಲಸ ಮಾಡುತ್ತಾ ಅವರಿಗೆ ಉತ್ತರ ಕೊಡುತ್ತಾರೆ. ಇದನ್ನೇ ರಾಜ್ಯದಾದ್ಯಂತ ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ಮಾಡುತ್ತಾರೆ’ ಎಂಬುದು ದಾಸ್ ಅವರ ಸ್ಪಷ್ಟೋಕ್ತಿಯಾಗಿದೆ.

‘ಕಳೆದ 23 ವರ್ಷಗಳಿಂದ ತಮ್ಮ ಆಡಳಿತದಲ್ಲಿ ಸಿಎಂ ನವೀನ್ ಅವರು ತಮ್ಮ ಉತ್ತಮ ಆಡಳಿತದಿಂದ ಒಂದು ಮಾದರಿ ಆಡಳಿತಕ್ಕೆ ಬುನಾದಿ ಹಾಕಿಕೊಟ್ಟಿದ್ದಾರೆ. ಅವರ 76 ನೇ ಜನ್ಮದಿನದ ಪ್ರಯುಕ್ತ ನಾವು ರಾಜ್ಯದಾದ್ಯಂತ ನವೀನಸಂ ಆರಂಭಿಸುತ್ತಿದ್ದೇವೆ’ ಎಂದಿದ್ದಾರೆ

‘ನವೀನಿಸಂ ಮೂಲಕ ನಾವು ಬರುವ ಲೋಕಸಭೆ ಚುನಾವಣೆಯಲ್ಲಿ 21 ಸ್ಥಾನಗಳನ್ನು ಹಾಗೂ ವಿಧಾನಸಭೆ ಚುನಾವಣೆಯಲ್ಲಿ 110 ರಿಂದ 147 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಳ್ಳಲಾಗಿದೆ’ ಎಂದು ಬಿಜೆಡಿ ಹಿರಿಯ ಉಪಾಧ್ಯಕ್ಷ ದೇಬಿ ಪ್ರಸಾದ್ ಮಿಶ್ರಾ ತಿಳಿಸಿದ್ದಾರೆ.

‘ನವೀನಸಂ ಹೊಸ ಕಲ್ಪನೆ ಏನೂ ಅಲ್ಲ, ಅದು ಬಿಜೆಡಿ ಆರಂಭದಿಂದಲೂ ಇದೆ. ನಮ್ಮನ್ನು ಕೆರಳಿಸಿ ಲಾಭ ಮಾಡಿಕೊಂಡು ಹೋಗಲು ಬರುವವರಿಗೆ ನಾವು ಇದೀಗ ಮತ್ತೆ ವ್ಯಾಪಕವಾಗಿ ನವೀನಿಸಂ ಆರಂಭಿಸುತ್ತಿದ್ದೇವೆ’ ಎಂದು ಬಿಜೆಡಿ ವಕ್ತಾರ ಲೇನಿನ್ ಮೊಹಾಂತಿ ಹೇಳಿದ್ದಾರೆ.

ಇನ್ನು ಬಿಜೆಡಿಯ ನವೀನಿಸಂ ಬಗ್ಗೆ ಕಿಡಿಕಾರಿರುವ ಬಿಜೆಪಿ, ‘ಇದು ಜನರನ್ನು ತಪ್ಪುದಾರಿಗೆ ಎಳೆಯಲು ಬಿಜೆಡಿಹೊಸದಾಗಿ ಆರಂಭಿಸಿರುವ ತಂತ್ರ’ ಎಂದು ಟೀಕಿಸಿದೆ. ‘ನವೀನ್ ಪಟ್ನಾಯಿಕ್ ನಂಬರ್ 1 ಮುಖ್ಯಮಂತ್ರಿ ಎಂದು ಬಿಜೆಡಿಯವರು ಹೇಳಿಕೊಳ್ಳುತ್ತಾರೆ. ಆದರೆ, ಇನ್ನೂ ಕೂಡ ಒಡಿಶಾ ರಾಜ್ಯ ಇತರ ರಾಜ್ಯಗಳಿಗಿಂತ ಅಭಿವೃದ್ದಿಯಲ್ಲಿ ಏಕೆ ಹಿಂದಿದೆ?’ ಎಂದು ಒಡಿಶಾ ಬಿಜೆಪಿ ವಕ್ತಾರ ಜೆಎನ್ ಮಿಶ್ರಾ ಪ್ರಶ್ನಿಸಿದ್ದಾರೆ.

2024 ರಲ್ಲಿ ಒಡಿಶಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.