ADVERTISEMENT

ಕತ್ತಲಾದ ಮೇಲೆ ಮಹಿಳೆಯರು ಠಾಣೆಗೆ ಹೋಗದಿರಿ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 3:30 IST
Last Updated 24 ಅಕ್ಟೋಬರ್ 2021, 3:30 IST
ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ
ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ   

ಲಖನೌ: ಕತ್ತಲಾದ ಮೇಲೆ, ಮಹಿಳೆಯರು ಪೊಲೀಸ್‌ ಠಾಣೆಗೆ ಹೋಗದಂತೆ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ ವಿಲಕ್ಷಣ ಸಲಹೆ ನೀಡಿದ್ದಾರೆ.

ಈ ಹೇಳಿಕೆಯಿಂದ ಪಕ್ಷವು ಮುಜುಗರಕ್ಕೀಡಾಗಿದೆ. ಇದರೊಂದಿಗೆ, ಉತ್ತರ ಪ್ರದೇಶದಲ್ಲಿ ಮಹಿಳೆಯರ ಸುರಕ್ಷತೆ ಬಗೆಗೂ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಉತ್ತರಾಖಂಡದ ಮಾಜಿ ರಾಜ್ಯಪಾಲರಾದ ಬೇಬಿ ರಾಣಿ, ಶುಕ್ರವಾರ ಸಂಜೆ ವಾರಾಣಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಂಥ ಸಲಹೆ ನೀಡಿದ್ದಾರೆ.

ADVERTISEMENT

‘ಪೊಲೀಸ್‌ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಇರುತ್ತಾದರೂ ಸಂಜೆ ಐದರ ನಂತರ ಮಹಿಳೆಯರು ಅಲ್ಲಿಗೆ ಹೋಗದಿರುವುದೇ ಒಳ್ಳೆಯದು. ಪೊಲೀಸ್‌ ಠಾಣೆಗೆ ಹೋಗಲೇಬೇಕಿದ್ದರೆ ಅಣ್ಣ, ಅಪ್ಪ, ಪತಿ ಯಾರನ್ನಾದರೂ ಜೊತೆಗೆ ಕರೆದುಕೊಂಡು ಹೋಗಿ’ ಎಂದು ಹೇಳಿದ್ದಾರೆ.

ಮಹಿಳೆಯರ ಸುರಕ್ಷತೆಗಾಗಿ ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಕಳೆದ ಕೆಲವು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ ಎಂದೂ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಲು ಬಿಜೆಪಿ ಮುಖಂಡರು ನಿರಾಕರಿಸಿದ್ದಾರೆ. ಆದರೆ, ವಿರೋಧ ಪಕ್ಷಗಳು, ಮೌರ್ಯ ಅವರ ಹೇಳಿಕೆ ರಾಜ್ಯದ ನೈಜ ಸ್ಥಿತಿಯನ್ನು ಬಿಂಬಿಸಿದ್ದಾಗಿ ಹೇಳಿವೆ.

‘ಉತ್ತರ ಪ್ರದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಪೊಲೀಸ್‌ ಠಾಣೆಗಳಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬುದನ್ನು ನಾವು ಹಲವು ಬಾರಿ ಹೇಳಿದ್ದೇವೆ. ಮೌರ್ಯ ಅವರ ಹೇಳಿಕೆ ನಮ್ಮ ಆರೋಪಗಳಿಗೆ ಬಲ ನೀಡಿವೆ’ ಎಂದು ಸಮಾಜವಾದಿ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.