ADVERTISEMENT

ಕೋವಿಡ್‌ ವಿಪತ್ತಿನಲ್ಲೂ ರಾಮ ಮಂದಿರಕ್ಕಾಗಿ ಬಿಜೆಪಿಯಿಂದ ಚಂದಾ ವಸೂಲಿ: ಅಖಿಲೇಶ್‌

ಏಜೆನ್ಸೀಸ್
Published 20 ಫೆಬ್ರುವರಿ 2021, 11:08 IST
Last Updated 20 ಫೆಬ್ರುವರಿ 2021, 11:08 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಲಕ್ನೋ: ಕೋವಿಡ್‌ನಂತಹ ವಿಷಮ ಪರಿಸ್ಥಿತಿಯಲ್ಲೂ ಬಿಜೆಪಿಯು ರಾಮ ಮಂದಿರಕ್ಕಾಗಿ ಚಂದಾ ಎತ್ತುತ್ತಿದೆ. ಆ ಮೂಲಕ ಸಾಂಕ್ರಾಮಿಕ ರೋಗವನ್ನೇ ಬಂಡವಾಳವನ್ನಾಗಿ ಬಿಜೆಪಿ ಮಾಡಿಕೊಂಡಿದೆ ಎಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಈ ಬಗ್ಗೆ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, 'ವಿಪತ್ತಿನಲ್ಲಿ ಅವಕಾಶಗಳನ್ನು ಸೃಷ್ಟಿಸಿದ್ದೇವೆ ಎಂದು ಬಿಜೆಪಿ ಸರ್ಕಾರವೇ ಹೇಳಿಕೊಂಡಿದೆ. ಆದ್ದರಿಂದ, ಕೋವಿಡ್‌ನಂತಹ ವಿಪತ್ತಿನ ಸಮಯದಲ್ಲಿ ರಾಮ ಮಂದಿರಕ್ಕಾಗಿ ಚಂದಾ ಸಂಗ್ರಹಿಸುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರು 'ಚಂದಾಜೀವಿ'ಗಳು ಎಂದಿರುವ ಅಖಿಲೇಶ್‌, 'ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಚಂದಾ ಎತ್ತುವ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ನಮ್ಮಲ್ಲಿ ದಕ್ಷಿಣೆ ನೀಡುವ ಸಂಸ್ಕೃತಿ ಇದೆ. ಬಿಜೆಪಿ ಒಪ್ಪಿಕೊಂಡರೆ ದಕ್ಷಿಣೆ ನೀಡಲು ನಾವು ಸಿದ್ಧರಿದ್ದೇವೆ' ಎಂದು ಹೇಳಿದ್ದಾರೆ.

ADVERTISEMENT

ಇದೇ ಸಂದರ್ಭದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, 'ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಇದರಿಂದ ಸಾಮಾನ್ಯ ಜನರು, ರೈತರು ಮತ್ತು ಯುವಕರ ಮೇಲೆ ಹೊರೆಯಾಗಿದೆ. ರಾಷ್ಟ್ರ ನಿರ್ಮಾಣಕ್ಕಾಗಿ ಬೆಲೆ ಏರಿಕೆ ಎಂಬುದಾಗಿ ಸರ್ಕಾರ ಹೇಳುತ್ತಿರುವುದು ವಿಷಾದಕರ ಮತ್ತು ನಾಚಿಕೆಗೇಡಿನ ಸಂಗತಿ' ಎಂದು ಹರಿಹಾಯ್ದಿದ್ದಾರೆ.

'ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ವಿಧಾನಸಭೆಯಲ್ಲಿಯೂ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಶಿಕ್ಷೆ ನೀಡಲಿದ್ದಾರೆ' ಎಂದು ಅಖಿಲೇಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.