(ಸಂಗ್ರಹ ಚಿತ್ರ)
ಚಿಕ್ಕೋಡಿ: ಕರ್ನಾಟಕ ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪಾಕ್ ಪರ ಮಾತನಾಡಲು ಪಕ್ಷ ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಫೆಬ್ರುವರಿ 27ರಂದು ನಡೆದ ರಾಜ್ಯಸಭೆ ಚುನಾವಣೆ ಗೆಲುವಿನ ಬಳಿಕ ಕಾಂಗ್ರೆಸ್ ನಾಯಕ ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಈ ಸಂಬಂಧ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ಜನಾದೇಶ ನಮ್ಮ ಪರವಾಗಿರಲಿಲ್ಲ. ಆದರೆ ಜನರು ಆಯ್ಕೆ ಮಾಡಿರುವ ಸರ್ಕಾರವು ಜನರಿಗೆ ಮೋಸ ಮಾಡುತ್ತಿದ್ದು, ಹಾದಿ ತಪ್ಪಿಸುತ್ತಿದೆ ಎಂಬುದನ್ನು ನೀವೀಗ ಮನಗಂಡಿರಬಹುದು ಎಂದು ನಡ್ಡಾ ಹೇಳಿದರು.
ಕರ್ನಾಟಕದಲ್ಲಿ ಏನಾದರೂ ಉಚಿತವಾಗಿ ಲಭ್ಯವಿದ್ದರೆ ಅದು ಭಯೋತ್ಪಾದನೆ. ಎಂತಹ ಪರಿಸ್ಥಿತಿ ಬಂದಿದೆ. ಭಯೋತ್ಪಾದಕರಿಗೆ ಪ್ರೋತ್ಸಾಹ ಸಿಗುತ್ತಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಮೊಳಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೂಕ ಪ್ರೇಕ್ಷಕರಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಕರ್ನಾಟಕಕ್ಕೆ ಸೇರಿದ್ದವರಲ್ಲವೇ? ಎಂದು ಹೇಳಿದರು.
ಈ ವಿಷಯದಲ್ಲಿ ಖರ್ಗೆ ಏಕೆ ಮೌನ ವಹಿಸುತ್ತಿದ್ದಾರೆ ? ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಏಕೆ ಪ್ರತಿಕ್ರಿಯಿಸುತ್ತಿಲ್ಲ? ರಾಹುಲ್ ಅವರ ಭಾರತ ಜೋಡೊ ಯಾತ್ರೆಯ ಉದ್ದೇಶ ಏನು? ಅವರು (ಕಾಂಗ್ರೆಸ್ಸಿಗರು) ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನವನ್ನು ಪ್ರತಿನಿಧಿಸುತ್ತಿದ್ದೀರೇ? ಈ ಕುರಿತು ಕರ್ನಾಟಕದ ಜನತೆ ಹಾಗೂ ಇಡೀ ದೇಶವೇ ಉತ್ತರವನ್ನು ಬಯಸುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.