ನವದೆಹಲಿ: ಭಾರತಕ್ಕೆ ಅಪಖ್ಯಾತಿಯನ್ನುಂಟು ಮಾಡಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ವಿದೇಶಿ ಶಕ್ತಿಗಳ ನೆರವಿನೊಂದಿಗೆ ವ್ಯವಸ್ಥಿತ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ.
'ನ್ಯೂಸ್‌ಕ್ಲಿಕ್' ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆಯ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ₹9.59 ಕೋಟಿ ಮತ್ತು ಸಂದೇಹಪೂರಿತ ಕೃತ್ಯಗಳಿಗಾಗಿ ಮತ್ತೊಂದು ₹28.46 ಕೋಟಿ ಧನ ಸಹಾಯವನ್ನು ಪಡೆದಿದೆ ಎಂದು ಹೇಳಿದ್ದಾರೆ.
ತನ್ನನ್ನು ತಾನೇ ಮಾಧ್ಯಮ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವ ನ್ಯೂಸ್‌ಕ್ಲಿಕ್, ಭಾರತದ ವ್ಯವಸ್ಥೆ ದುರ್ಬಲವಾದದ್ದು ಮತ್ತು ವಿದೇಶಿ ಉದ್ದೇಶಕ್ಕಾಗಿ ಅನುಮಾನಾಸ್ಪದ ರೀತಿಯಲ್ಲಿ ಕೋಟ್ಯಂತರ ರೂಪಾಯಿಗಳ ಧನ ಸಹಾಯವನ್ನು ಪಡೆದಿದೆ ಎಂದು ಆರೋಪಿದರು.
ವಿದೇಶದ ವ್ಯವಸ್ಥಿತ ಪ್ರಚಾರವನ್ನು ಹಂಚುವುದು ಮತ್ತು ಭಾರತಕ್ಕೆ ಮಸಿ ಬಳಿಯುವುದು ಇದರ ಉದ್ದೇಶವಾಗಿದೆ. ಭಾರತದಲ್ಲಿ ಶಾಂತಿಯ ವಾತಾವರಣ ಕೆಡವಲು ಭಾರತೀಯ ರಾಜಕಾರಣಿಗಳು ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಟೂಲ್‌ಕಿಟ್‌ನ ಭಾಗ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.
ವಿವಿಧ ಮೂಲಗಳ ಮೂಲಕ ಧನ ಸಹಾಯ ಸಂಗ್ರಹಿಸಲಾಗಿದೆ. ಇದರಲ್ಲಿ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಕಾರ್ಯಕರ್ತ ಗೌತಮ್ ನವಲಖಾ ಸೇರಿದ್ದಾರೆ ಎಂದು ಹೇಳಿದರು.
ವಿದೇಶಿ ಶಕ್ತಿಗಳೊಂದಿಗೆ ಸೇರಿಕೊಂಡು ದೇಶ ವಿರೋಧಿಗಳು ಇದನ್ನು ಮಾಡುತ್ತಿದ್ದಾರೆ. ದೇಶ ವಿರೋಧಿ ಭಾವನೆ ಹುಟ್ಟುಹಾಕುವುದು, ನರೇಂದ್ರ ಮೋದಿ ಹಾಗೂ ಭಾರತ ಸರ್ಕಾರವನ್ನು ನಿಂದಿಸುವುದು ಇದರ ಹಿಂದಿನ ಗುರಿಯಾಗಿದೆ. ಇದೇ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದ ಕೋವಿಡ್ ಲಸಿಕೆ ಅಭಿಯಾನ ಹಾಗೂ ಸೆಂಟ್ರಲ್ ವಿಸ್ಟಾ ಯೋಜನೆಗೆ ಮಸಿ ಬಳಿಯಲು ಪ್ರಯತ್ನಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.