ADVERTISEMENT

ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಲು ಬಿಜೆಪಿ ಒತ್ತಾಯ

ಬಿಜೆಪಿ ನಿಯೋಗದಿಂದ ರಾಷ್ಟ್ರಪತಿ ಭೇಟಿ

ಪಿಟಿಐ
Published 14 ಜುಲೈ 2020, 13:26 IST
Last Updated 14 ಜುಲೈ 2020, 13:26 IST
ಕೈಲಾಶ್ ವಿಜಯವರ್ಗಿಯಾ
ಕೈಲಾಶ್ ವಿಜಯವರ್ಗಿಯಾ   

ನವದೆಹಲಿ: ‘ಬಿಜೆಪಿ ಮುಖಂಡದೇವೇಂದ್ರ ನಾಥ್ ರಾಯ್‌ ನಿಗೂಢ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವುದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಭೇಟಿ ಮಾಡಿ ಬಿಜೆಪಿ ನಿಯೋಗ ಒತ್ತಾಯಿಸಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಪಕ್ಷದ ಸಂಸದ ರಾಜು ಬಿಸ್ತಾ ಮತ್ತು ಸಂಸದ ಸ್ವಪನ್‌ ದಾಸ್‌ಗುಪ್ತಾ ಅವರನ್ನೊಳಗೊಂಡ ನಿಯೋಗ ರಾಷ್ಟ್ರಪತಿಯವರನ್ನು ಭೇಟಿ ಮಾಡಿತ್ತು.

ರಾಯ್‌ ಅವರ ಕೊಲೆ ರಾಜ್ಯದ ರಾಜಕೀಯ ಹತ್ಯೆಗಳ ದೀರ್ಘ ಸರಣಿಯ ಮುಂದುವರಿಕೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ADVERTISEMENT

‘ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಗಲ್ಲಿಗೇರಿಸಲಾಗುತ್ತಿದೆ. ಇಲ್ಲಿಯವರೆಗೆ ರಾಜಕೀಯ ಕಾರ್ಯಕರ್ತರ ಕೊಲೆ ಮಾಡಲಾಗುತ್ತಿತ್ತು. ಆದರೆ, ಈಗ ಚುನಾಯಿತ ನಾಯಕರನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ರಾಜ್ಯದಲ್ಲಿ ಅರಾಜಕತೆ ಮೇಲುಗೈ ಸಾಧಿಸಿದೆ. ಸರ್ಕಾರಕ್ಕೆ ಅಧಿಕಾರದಲ್ಲಿ ಇರುವ ಯಾವುದೇ ಹಕ್ಕಿಲ್ಲ. ವಿಧಾನಸಭೆಯನ್ನು ತಕ್ಷಣವೇ ವಿಸರ್ಜಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ’ ಎಂದು ವಿಜಯವರ್ಗಿಯಾ ಹೇಳಿದ್ದಾರೆ.

‘ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಜೊತೆಗೆ ಸಂಬಂಧ ಹೊಂದಿದ್ದ 105ಕ್ಕೂ ಹೆಚ್ಚು ಜನರನ್ನು ಕೊಲೆ ಮಾಡಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಮಮತಾ ಬ್ಯಾನರ್ಜಿ ಸರ್ಕಾರ ರಾಜಕೀಯ ಪ್ರತಿಸ್ಪರ್ಧಿಗಳಿಗೆ ಕಿರುಕುಳ ನೀಡಲು ರಾಜ್ಯ ಪೊಲೀಸರನ್ನು ಬಳಸುತ್ತಿದೆ. ಸತ್ಯ ಹೊರಬರಲು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದು ಅಗತ್ಯ’ ಎಂದು ಬಿಸ್ತಾ ಆಗ್ರಹಿಸಿದ್ದಾರೆ.

ರಾಯ್‌ ಅವರ ಮರಣೋತ್ತರ ವರದಿ ಬಂದಿದ್ದು, ನೇಣು ಬಿಗಿದ ಗಾಯದ ಹೊರತು ಅವರ ದೇಹದಲ್ಲಿ ಬೇರೆ ಗಾಯಗಳು ಪತ್ತೆಯಾಗಿಲ್ಲ. ಅವರ ಶರ್ಟ್‌ ಜೇಬಿನಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ. ಅದರಲ್ಲಿ ತಮ್ಮ ಆತ್ಮಹತ್ಯೆಗೆ ಪ್ರಚೋದಿಸಿದ ಇಬ್ಬರ ಹೆಸರನ್ನು ಅವರು ಬರೆದಿದ್ದಾರೆ ಎಂದು ಹೇಳಲಾಗಿದೆ.

ಶಾಸಕ ದೇವೇಂದ್ರ ನಾಥ್ ರಾಯ್‌ ಅವರು ಉತ್ತರ ದಿನಾಜ್‌ಪುರ ಜಿಲ್ಲೆಯ ಅವರ ನಿವಾಸದ ಸಮೀಪದ ಮಳಿಗೆಯೊಂದರ ಮುಂಭಾಗ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.