ADVERTISEMENT

ಪಶ್ಚಿಮ ಬಂಗಾಳ | ಪೊಲೀಸರ ಗುಂಡಿನಿಂದಲೇ ಸಾವು: ಬಿಜೆಪಿ ನಿಯೋಗ ಆರೋಪ

ಮತ್ತೆ ಗಲಭೆ

ಪಿಟಿಐ
Published 22 ಜೂನ್ 2019, 17:32 IST
Last Updated 22 ಜೂನ್ 2019, 17:32 IST
   

ಕೋಲ್ಕತ್ತ: ‘ಪಶ್ಚಿಮ ಬಂಗಾಳದ ಭಾಟಪಾರದಲ್ಲಿ ಗುಂಪು ಘರ್ಷಣೆ ನಡೆದಾಗ ಪೊಲೀಸರು ಗುಂಡು ಹಾರಿಸಿದ್ದೇ ಇಬ್ಬರ ಸಾವಿಗೆ ಕಾರಣ’ ಎಂದು ಬಿಜೆಪಿ ಸಂಸದರ ನಿಯೋಗ ಆರೋಪಿಸಿದೆ.

ಗುಂಪು ಘರ್ಷಣೆ ಸ್ಥಳಕ್ಕೆ ಭೇಟಿ ನೀಡಿ ಸ್ಥಿತಿಗತಿಯ ವರದಿ ಸಲ್ಲಿಸಲು ಬಿಜೆಪಿಯು ಕೇಂದ್ರದ ಮಾಜಿ ಸಚಿವ ಎಸ್.ಎಸ್‌. ಅಹ್ಲುವಾಲಿಯಾ, ಸತ್ಯಪಾಲ್‌ ಸಿಂಗ್ ಮತ್ತು ಬಿ.ಡಿ. ರಾಮ್ ಅವರನ್ನೊಳಗೊಂಡ ಸಮಿತಿ ರಚಿಸಿತ್ತು. ಈ ಸಮಿತಿ ಶನಿವಾರ ಗಲಭೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಈ ಆರೋಪ ಮಾಡಿದೆ.

‘ಗಾಳಿಯಲ್ಲಿ ಗುಂಡು ಹಾರಿಸಿರುವುದಾಗಿ ಪೊಲೀಸರು ಹೇಳುತ್ತಾರೆ. ಅದು ನಿಜವೇ ಆಗಿದ್ದರೆ, ಮನುಷ್ಯರಿಗೆ ತಾಗಲು ಹೇಗೆ ಸಾಧ್ಯ’ ಎಂದು ಅಹ್ಲುವಾಲಿಯಾ ಪ್ರಶ್ನಿಸಿದರು. ಭಾಟಪಾರದಲ್ಲಿ ಈಚೆಗೆ ನಡೆದ ಗುಂಪು ಘರ್ಷಣೆಯಲ್ಲಿ ಇಬ್ಬರು ಸತ್ತು, 11 ಮಂದಿ ಗಾಯಗೊಂಡಿದ್ದರು.

ADVERTISEMENT

ಸಂಸದರ ನಿಯೋಗದ ನಿಲುವನ್ನು ಖಂಡಿಸಿರುವ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು, ‘ಭಾಟಪಾರದಲ್ಲಿ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸುವುದೇ ಬಿಜೆಪಿ ನಿಯೋಗದ ಉದ್ದೇಶ’ ಎಂದು ಕಿಡಿಕಾರಿದರು.

ಸಿಬಿಐ ತನಿಖೆಗೆ ಆಗ್ರಹ: ಇಬ್ಬರ ಸಾವಿಗೆ ಕಾರಣವಾದ ಗುಂಪು ಘರ್ಷಣೆ ಘಟನೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್‌ ಮತ್ತು ಸಿಪಿಎಂ ಆಗ್ರಹಪಡಿಸಿವೆ.

ಬಿಜೆಪಿ ಸ್ಥಳೀಯ ಘಟಕ ಕೂಡಾ ಸಿಬಿಐ ತನಿಖೆಗೆ ಆಗ್ರಹಪಡಿಸಿದೆ. ಇಬ್ಬರ ಸಾವು ಮತ್ತು ಘರ್ಷಣೆಯನ್ನು ಖಂಡಿಸಿ ಬಿಜೆಪಿ ಶುಕ್ರವಾರ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತ್ತು.

ಮತ್ತೆ ಘರ್ಷಣೆ: ಕಲ್ಲು ತೂರಾಟ

ಬಿಜೆಪಿಯ ಸಂಸದರ ನಿಯೋಗ ಭೇಟಿ ನೀಡಿ ವಾಪಸಾಗುತ್ತಿದ್ದಂತೆ ಭಾಟಪಾರದಲ್ಲಿ ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಂಡಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಶನಿವಾರ ಮತ್ತೆ ಗುಂಪು ಘರ್ಷಣೆ ನಡೆದು, ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಗಿ ಬಂದಿದೆ.

ನಿಯೋಗವು ನಿರ್ಗಮಿಸುತ್ತಿದ್ದಂತೆಯೇ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ಗಂಪು ಘರ್ಷಣೆಗೆ ತೊಡಗಿ, ಪರಸ್ಪರರ ಮೇಲೆ ನಾಡಬಾಂಬ್‌ ಮತ್ತು ಕಲ್ಲುಗಳನ್ನು ಎಸೆದರು. ಘರ್ಷಣೆಯಲ್ಲಿ ಹಲವರು ಗಾಯಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.