ADVERTISEMENT

ಯೋಗಿ ಆದಿತ್ಯನಾಥ ಉತ್ತರ ಪ್ರದೇಶದವರಲ್ಲ, ಉತ್ತರಾಖಂಡದವರು: ಅಖಿಲೇಶ್ ಯಾದವ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 11:49 IST
Last Updated 20 ಫೆಬ್ರುವರಿ 2021, 11:49 IST
ಅಖಿಲೇಶ್ ಯಾದವ್ ಹಾಗೂ ಯೋಗಿ ಆದಿತ್ಯನಾಥ (ಪಿಟಿಐ ಸಂಗ್ರಹ ಚಿತ್ರ)
ಅಖಿಲೇಶ್ ಯಾದವ್ ಹಾಗೂ ಯೋಗಿ ಆದಿತ್ಯನಾಥ (ಪಿಟಿಐ ಸಂಗ್ರಹ ಚಿತ್ರ)   

ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೊರಗಿನವರು. ಅವರಿಗೆ ರಾಜ್ಯದ ಬಗ್ಗೆ ಬಹಳ ಕಡಿಮೆ ತಿಳಿವಳಿಕೆ ಇದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ‘ಆದಿತ್ಯನಾಥ ಅವರು ಉತ್ತರ ಪ್ರದೇಶದ ಜನರಿಗೆ ತಮ್ಮ ತಾಯ್ನಾಡಿನ ಬಗ್ಗೆ ಮಾಹಿತಿ ನೀಡಬೇಕು. ಆದಿತ್ಯನಾಥ ಅವರು ಸಂತರಾಗುವ ಮೊದಲು ಅವರ ಹೆಸರು ಅಜಯ್ ಬಿಶ್ತ್ ಎಂದಾಗಿತ್ತು. ಅವರು ಉತ್ತರಾಖಂಡದಿಂದ ಬಂದವರು. ಬಿಜೆಪಿಯು ಹೊರಗಿನವರನ್ನು ರಾಜ್ಯದ ಜನತೆಯ ಮೇಲೆ ಹೇರಿಕೆ ಮಾಡಿದೆ’ ಎಂದು ಹೇಳಿದ್ದಾರೆ.

‘ಅವರಿಗೆ (ಯೋಗಿ) ಉತ್ತರ ಪ್ರದೇಶದ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದ್ದರಿಂದ ಸಮಾಜವಾದಿ ಪಕ್ಷದ ಆಳ್ವಿಕೆ ಕಾಲದಲ್ಲಿ ಮಾಡಿದ ಕೆಲಸಗಳ ಶ್ರೇಯವನ್ನು ತಾವು ಪಡೆಯುತ್ತಿದ್ದಾರೆ’ ಎಂದು ಅಖಿಲೇಶ್ ದೂರಿದ್ದಾರೆ.

'ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ವಿಧಾನಸಭೆಯಲ್ಲಿಯೂ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ಶಿಕ್ಷೆ ನೀಡಲಿದ್ದಾರೆ' ಎಂದು ಅಖಿಲೇಶ್‌ ಹೇಳಿದ್ದಾರೆ.

ಬಿಜೆಪಿ ಸರ್ಕಾರವು ಹೊಸ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಹಾಗೂ ಅವರ ಕುಟುಂಬದವರನ್ನು ಅವಮಾನಿಸಿದೆ. ಅವರು ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌, ಬಿಎಸ್‌ಪಿ ಹಾಗೂ ಇತರ ಪಕ್ಷಗಳ ಕೆಲವು ನಾಯಕರೂ ಅಖಿಲೇಶ್‌ಗೆ ಸಾಥ್ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.