ADVERTISEMENT

ಮೋದಿ ವಿರುದ್ಧವೇ ತೊಡೆತಟ್ಟಿದ ಮಿತ್ರ ಪಕ್ಷ

ಯೋಗಿ ಆದಿತ್ಯನಾಥ–ರಾಜ್‌ಭರ್ ನಡುವೆ ಭಿನ್ನಾಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 17:22 IST
Last Updated 16 ಏಪ್ರಿಲ್ 2019, 17:22 IST
ಓಂ ಪ್ರಕಾಶ್‌ ರಾಜ್‌ಭರ್‌
ಓಂ ಪ್ರಕಾಶ್‌ ರಾಜ್‌ಭರ್‌   

ಲಖನೌ: ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಮಿತ್ರಪಕ್ಷ ‘ಸುಹಲ್‌ದೇವ್ ಭಾರತೀಯ ಸಮಾಜ ಪಕ್ಷ’ (ಎಸ್‌ಬಿಎಸ್‌ಪಿ) ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹೊಡೆತ ನೀಡಿದೆ. ಉತ್ತರ ಪ್ರದೇಶದಲ್ಲಿ 39 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ.

ಒಬಿಸಿಗೆ ಸೇರಿರುವ ರಾಜ್‌ಭರ್ ಸಮುದಾಯದ ಮೇಲೆ ನಿಯಂತ್ರಣ ಹೊಂದಿರುವ ಎಸ್‌ಬಿಎಸ್‌ಪಿ, ಬಿಜೆಪಿ ಜೊತೆಗಿನ ಮೈತ್ರಿ ಮುಗಿದ ಅಧ್ಯಾಯ ಎಂಬ ಸುಳಿವು ನೀಡಿದೆ.

ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿರುವ, ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂಪ್ರಕಾಶ್ ರಾಜ್‌ಭರ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ಬಿಜೆಪಿ ಜತೆಗಿನ ಸ್ಥಾನ ಹೊಂದಾಣಿಕೆ ಒಪ್ಪಂದದಿಂದ ಬೇಸರಗೊಂಡಿದ್ದು, ಏಕಾಂಗಿಯಾಗಿ ಸ್ಪರ್ಧೆ ಮಾಡಲು ಪಕ್ಷ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದರು.

ADVERTISEMENT

ಯೋಗಿ ಆದಿತ್ಯನಾಥ ಮತ್ತು ಬಿಜೆಪಿ ಜತೆಗೆ ರಾಜ್‌ಭರ್ ಅವರ ಸಂಬಂಧಕಳೆದ ಒಂದು ವರ್ಷದಿಂದಸರಿಯಿರಲಿಲ್ಲ. ರಾಜ್ಯ ಸರ್ಕಾರದ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಸಂಬಂಧ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು.

ಉತ್ತರ ಪ್ರದೇಶದ ಪೂರ್ವಭಾಗದಲ್ಲಿ ತಮ್ಮ ಸಮುದಾಯದ ಜನರೇ ಹಚ್ಚಿರುವ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ರಾಜ್‌ಭರ್ ಬೇಡಿಕೆಯಿಟ್ಟಿದ್ದರು. ಘೋಸಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಇವರಿಗೆ ಆಹ್ವಾನ ನೀಡಿದ್ದ ಬಿಜೆಪಿ, ಬಳಿಕ ಟಿಕೆಟ್ ನೀಡಲು ನಿರಾಕರಿಸಿತ್ತು.

ವಿವಾದವನ್ನು ತಣಿಸಲು ಯತ್ನಿಸಿರುವ ಬಿಜೆಪಿ ನಾಯಕರು, ರಾಜ್‌ಭರ್ ಅವರು ಮೈತ್ರಿಕೂಟದ ಪ್ರಮುಖರಾಗಿದ್ದು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿದ್ದಾರೆ.

ಅಭ್ಯರ್ಥಿಗಳನ್ನು ಹಿಂತೆಗೆದುಕೊಳ್ಳುವಂತೆ ರಾಜ್‌ಭರ್ ಅವರನ್ನು ಮನವೊಲಿಸುವ ಯತ್ನದಲ್ಲಿ ಬಿಜೆಪಿ ತೊಡಗಿದೆ. ಶೇ 4ರಷ್ಟು ಮತದಾರರನ್ನು ಹೊಂದಿರುವ ಸಮುದಾಯ, ಪೂರ್ವ ಭಾಗದ ಸುಮಾರು 12 ಲೋಕಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.