ADVERTISEMENT

ಹತ್ತಿರ ಬಂತು ಚುನಾವಣೆ: ಟೀವಿಗಳಲ್ಲಿ ರಾರಾಜಿಸುತ್ತಿದೆ ಬಿಜೆಪಿ ಜಾಹೀರಾತು

ಐದು ರಾಜ್ಯಗಳ ವಿಧಾನಸಭೆ, ಮುಂದಿನ ವರ್ಷ ಲೋಕಸಭಾ ಚುನಾವಣೆ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 9:44 IST
Last Updated 23 ನವೆಂಬರ್ 2018, 9:44 IST
   

ಬೆಂಗಳೂರು:ಕೆಲ ರಾಜ್ಯಗಳ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಟೀವಿ ಜಾಹೀರಾತಿಗಾಗಿ ಸಾಕಷ್ಟು ಖರ್ಚು ಮಾಡುತ್ತಿದೆ. ಜಾಹೀರಾತಿಗಾಗಿ ಹಣ ವ್ಯಯಿಸುವ ವಿಚಾರದಲ್ಲಿವಾಣಿಜ್ಯ ಕಂಪನಿಗಳನ್ನು ಹಿಂದಿಕ್ಕಿರುವ ಬಿಜೆಪಿ, ಬಾರ್ಕ್ ಸಂಸ್ಥೆಬಿಡುಗಡೆ ಮಾಡುವ ಜಾಹೀರಾತುದಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ನವೆಂಬರ್ 10ರಿಂದ 16ರ ನಡುವೆ ಒಟ್ಟು 22,099 ಬಾರಿ ಬಿಜೆಪಿಯ ಜಾಹೀರಾತುಗಳು ಪ್ರಸಾರವಾಗಿವೆ. ಆಡಳಿತಾರೂಢ ಪಕ್ಷವೊಂದು ಬಾರ್ಕ್‌ ಜಾಹೀರಾತು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇರಬಹುದು ಎಂದು 'ಎಕ್ಸ್‌ಚೇಂಜ್ ಫಾರ್ ಮೀಡಿಯಾ' ಜಾಲತಾಣ ಶುಕ್ರವಾರ ವರದಿ ಮಾಡಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ, ತೆಲಂಗಾಣ ಮತ್ತು ಮಿಝೋರಾಂ ವಿಧಾನಸಭಾ ಚುನಾವಣೆಗಳನ್ನು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.ಟೀವಿ ಜಾಹೀರಾತಿಗೆ ಬಿಜೆಪಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ವ್ಯಯಿಸಲು ಇದೇ ಮುಖ್ಯ ಕಾರಣ ಎಂದು ರಾಜಕೀಯ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ. ದೇಶದ ಉದ್ದಗಲಕ್ಕೂ ವ್ಯಾಪಿಸಿರುವ ಮತದಾರರನ್ನು ತಲುಪಲು ಟೀವಿ ಪ್ರಭಾವಿ ಮಾಧ್ಯಮ ಎಂದು ಬಿಜೆಪಿ ಭಾವಿಸಿದೆ.

ADVERTISEMENT

ಅಧಿಕಾರಕ್ಕೆ ಬಂದ ಮೊದಲ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 4300 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ಮತ್ತು ಪ್ರಚಾರ ಪಡೆಯಲುಖರ್ಚು ಮಾಡಿದೆ. ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಸಲ್ಲಿಸಿದ ಅರ್ಜಿಯೊಂದಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ಸರ್ಕಾರ ಈ ಮಾಹಿತಿ ನೀಡಿದೆ.

ಬಾರ್ಕ್‌ ಸಂಸ್ಥೆ ಬಿಡುಗಡೆ ಮಾಡಿರುವ ಅತಿಹೆಚ್ಚು ಜಾಹೀರಾತು ನೀಡಿರುವ ಉತ್ಪನ್ನಗಳಪಟ್ಟಿಯಲ್ಲಿರುವ ಎರಡನೇ ಹೆಸರು ಆನ್‌ಲೈನ್‌ ಸ್ಟ್ರೀಮಿಂಗ್ ಉದ್ಯಮದಲ್ಲಿರುವನೆಟ್‌ಫ್ಲಿಕ್ಸ್‌ ಕಂಪನಿಯದ್ದು. ಒಟ್ಟು 12,951 ಬಾರಿ ನೆಟ್‌ಫ್ಲಿಕ್ಸ್ ಜಾಹೀರಾತುಗಳು ಪ್ರಸಾರವಾಗಿವೆ. ನಂತರದ ಸ್ಥಾನದಲ್ಲಿ ಟ್ರಿವಾಗೊ (12,795), ಸಂತೂರ್ ಸ್ಯಾಂಡಲ್ ಅಂಡ್ ಟರ್ಮರಿಕ್ (11,222), ಡೆಟಾಲ್ ಲಿಕ್ವಿಡ್ ಸೋಪ್ (9487), ವೈಪ್ (9082) ಜಾಹೀರಾತುಗಳು ಇವೆ.

ಕೋಲ್ಗೇಟ್ ಡೆಂಟಲ್ ಕ್ರೀಂ (8938), ಡೆಟಾಲ್ ಟಾಯ್ಲೆಟ್ ಸೋಪ್ (8633), ಅಮೇಜಾನ್ ಪ್ರೈಮ್ ವಿಡಿಯೊ (8031) ಮತ್ತು ರೂಪ್‌ ಮಂತ್ರ ಆಯುರ್ ಫೇಸ್ ಕ್ರೀಂ (7692) ಉತ್ಪನ್ನಗಳು ಅತಿಹೆಚ್ಚು ಜಾಹೀರಾತು ನೀಡಿರುವಮೊದಲ ಹತ್ತು ಉತ್ಪನ್ನಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಬಾರ್ಕ್‌ನ ಟಾಪ್ 10 ಜಾಹೀರಾತುದಾರ ಕಂಪನಿಗಳ ಪಟ್ಟಿಯಲ್ಲಿ ಗ್ರಾಹಕ ಉತ್ಪನ್ನಗಳ ಬ್ರಾಂಡ್‌ಗಳಾದ ಹಿಂದೂಸ್ತಾನ್ ಯುನಿವಿಲರ್ (1,30,795) ಮತ್ತು ರೆಕಿಟ್ ಬೆಂಕಿಸರ್ (81,467) ಮೊದಲ ಎರಡು ಸ್ಥಾನ ಪಡೆದುಕೊಂಡಿವೆ. 39,506 ಜಾಹೀರಾತುಗಳೊಂದಿಗೆ ಐಟಿಸಿ ಮೂರನೇ ಸ್ಥಾನಕ್ಕೆ ಏರಿದೆ. ಪ್ರಾಕ್ಟರ್ ಅಂಡ್ ಗ್ಯಾಂಬಲ್ 37,611 ಜಾಹೀರಾತುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಪಾಂಡ್ಸ್‌ ಇಂಡಿಯಾ (32,491) ಮತ್ತು ವಿಪ್ರೊ (23,918) ಇವೆ.

ಕ್ಯಾಡ್‌ಬರೀಸ್ (23,544), ಬ್ರೂಕ್‌ಬಾಂಡ್ ಲಿಪ್ಟನ್ (22,939), ಗೋದ್ರೇಜ್ ಕನ್ಸೂಮರ್ ಪ್ರಾಡಕ್ಟ್ಸ್ (22,785) ಮತ್ತು ಮರಿಕೊ (22,195) ಮೊದಲ ಹತ್ತು ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.