ADVERTISEMENT

ಯಶಸ್ವಿ ಜನಪ್ರತಿನಿಧಿಯಾಗಿ 20 ವರ್ಷ ಪೂರೈಸಿದ ನರೇಂದ್ರ ಮೋದಿ

ಬಿಜೆಪಿಯ ನಾಯಕರಿಂದ ಅಭಿನಂದನೆಗಳ ಸುರಿಮಳೆ

ಪಿಟಿಐ
Published 7 ಅಕ್ಟೋಬರ್ 2020, 8:36 IST
Last Updated 7 ಅಕ್ಟೋಬರ್ 2020, 8:36 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: 20 ವರ್ಷಗಳ ಕಾಲ ಚುನಾವಣೆಗಳಲ್ಲಿ ಒಮ್ಮೆಯೂ ಸೋಲು ಕಾಣದೇ ಯಶಸ್ವಿ ಚುನಾಯಿತ ಪ್ರತಿನಿಧಿಯಾಗಿ ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಗಳಲ್ಲಿ ಮುನ್ನಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಜೆಪಿ ಶ್ಲಾಘಿಸಿದೆ.

‘ಮೋದಿ ಅವರು ರಾಜಕೀಯದಲ್ಲಿ ದೊಡ್ಡ ದೊಡ್ಡ ಗೆಲುವುಗಳನ್ನು ಸಾಧಿಸಿದ್ದಾರೆ ಮತ್ತು ಜನಪ್ರಿಯತೆಯ ತುತ್ತ ತುದಿಗೆ ತಲುಪಿದ್ದಾರೆ‘ ಎಂದು ನಡ್ಡಾ ಟ್ವೀಟ್‌ ಮಾಡಿದ್ದಾರೆ. ಬಿಜೆಪಿ ಪಕ್ಷ ಕೂಡ ಈ 19 ವರ್ಷಗಳಲ್ಲಿ ಮೋದಿ ಅವರ ಆಡಳಿತದಲ್ಲಿ ಘೋಷಣೆಯಾಗಿರುವ ಪ್ರಮುಖ ಯೋಜನೆಗಳ ಬಗ್ಗೆಯೂ ಟ್ವೀಟ್ ಮಾಡಿದೆ.

‘ಗುಜರಾತ್‌ ಮುಖ್ಯಮಂತ್ರಿಯಾಗಿರಲಿ ಅಥವಾ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಯಾಗಿರಲಿ, ಮೋದಿ ಅವರು ಸದಾ ಜನರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ‘ ಎಂದು ಬಿಜೆಪಿ ಶ್ಲಾಘಿಸಿದೆ.

ADVERTISEMENT

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ‘ಅಕ್ಟೋಬರ್ 7, 2001ರಲ್ಲಿ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರವಹಿಸಿಕೊಂಡಿದ್ದು, ಭಾರತೀಯ ರಾಜಕೀಯ ಇತಿಹಾಸದಲ್ಲೇ ಒಂದು ಮೈಲಿಗಲ್ಲು‘ ಎಂದು ಬಣ್ಣಿಸಿದ್ದಾರೆ.

ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಹರದೀಪ್ ಸಿಂಗ್ ಪುರಿ, ‘20 ವರ್ಷಗಳ ಕಾಲ ಬದ್ಧತೆ, ದೂರದರ್ಶಿತ್ವ ಹಾಗೂ ನಿಸ್ವಾರ್ಥವಾಗಿ ಭಾರತ ಮಾತೆಗೆ ಸೇವೆ ಸಲ್ಲಿಸಿದ್ದಾರೆ‘ ಎಂದು ಹೊಗಳಿದ್ದಾರೆ. ‘ಪ್ರಜಾಪ್ರಭುತ್ವದ ಅನುಸಾರ ಆಯ್ಕೆಯಾಗಿ 20 ವರ್ಷಗಳಿಂದ ನಿರಂತರವಾಗಿ ಜನಸೇವೆ ಮಾಡುತ್ತಿರುವ ವಿಶ್ವದ ಅಪರೂಪದ ನಾಯಕ ಮೋದಿ ಅವರಿಗೆ ಅಭಿನಂದನೆ‘ ಎಂದು ಟ್ವೀಟ್ ಮಾಡಿದ್ದಾರೆ.

‘ಗುಜರಾತ್‌ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ನರೇಂದ್ರಮೋದಿಯವರು 6941 ಯಶಸ್ವೀ ದಿನಗಳನ್ನು ಪೂರೈಸಿದ್ದಾರೆ. ತನ್ನ ಬಗ್ಗೆ ಯೋಚಿಸದೇ, ಸಾರ್ವಜನಿಕರ ಕಲ್ಯಾಣಕ್ಕಾಗಿ ದುಡಿದಿರುವ ಮೋದಿ ಅವರು, ತಮ್ಮ ಆಡಳಿತಾವಧಿಯಲ್ಲಿ ಯಾವುದೇ ಆರೋಪಗಳನ್ನು ಎದುರಿಸಿದ್ದನ್ನು ನಾನು ಕಾಣಲಿಲ್ಲ‘ ಎಂದು ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.