ADVERTISEMENT

ಮುಲಾಯಂರನ್ನು ಸಿನ್ಹಾ 'ಐಎಸ್ಐ ಏಜೆಂಟ್‌' ಎಂದಿದ್ದನ್ನು ನೆನಪಿಸಿದ ಬಿಜೆಪಿ ನಾಯಕರು

ಪಿಟಿಐ
Published 16 ಜುಲೈ 2022, 4:07 IST
Last Updated 16 ಜುಲೈ 2022, 4:07 IST
ಲಖನೌ: ಎಸ್‌ಪಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಖಿಲೇಶ್‌ ಯಾದವ್‌ ಮತ್ತು ವಿರೋಧ ಪಕ್ಷಗಳ ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಅವರು ವಿಜಯ ಸಂಕೇತವನ್ನು ತೋರಿಸಿದರು / ಪಿಟಿಐ ಚಿತ್ರ
ಲಖನೌ: ಎಸ್‌ಪಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಖಿಲೇಶ್‌ ಯಾದವ್‌ ಮತ್ತು ವಿರೋಧ ಪಕ್ಷಗಳ ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ ಸಿನ್ಹಾ ಅವರು ವಿಜಯ ಸಂಕೇತವನ್ನು ತೋರಿಸಿದರು / ಪಿಟಿಐ ಚಿತ್ರ   

ಲಖನೌ: ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರು ನೀಡಿದ್ದ ಹಳೆಯ ಹೇಳಿಕೆಯೊಂದನ್ನು ಕೆದಕಿರುವ ಬಿಜೆಪಿ ಮುಖಂಡರು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಲಾಯಂ ಸಿಂಗ್‌ ಅವರನ್ನು 'ಐಎಸ್‌ಐ ಏಜೆಂಟ್‌' ಎಂದು ಯಶವಂತ ಸಿನ್ಹಾ ಅವರು ಹಿಂದೆ ಟೀಕಿಸಿದ್ದನ್ನು ಪುನಃ ನೆನಪಿಸಿದ್ದಾರೆ.

ಜುಲೈ 18ಕ್ಕೆ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧದ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಬೆಂಬಲಿಸುತ್ತಿರುವುದನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮತ್ತು ಬಿಜೆಪಿ ಹಿರಿಯ ನಾಯಕ ಬ್ರಜೇಶ್‌ ಪಾಠಕ್‌ ಟೀಕಿಸಿದ್ದಾರೆ.

ಮುಲಾಯಂ ಅವರನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ)ಯ ಏಜೆಂಟ್‌ ಎಂದಿರುವ ಸಿನ್ಹಾ ಅವರ ಹೆಳಿಕೆಯಿರುವ ಹಳೆಯ ಸುದ್ದಿ ಪತ್ರಿಕೆಯ ತುಣುಕನ್ನು ಮೌರ್ಯ ಮತ್ತು ಪಾಠಕ್‌ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ADVERTISEMENT

'ಮುಲಾಯಂ ಸಿಂಗ್‌ ಯಾದವ್‌ ಅವರ ಬಗ್ಗೆ ನೀವು ಬೆಂಬಲಿಸುತ್ತಿರುವ ರಾಷ್ಟ್ರಪತಿ ಅಭ್ಯರ್ಥಿ ಆಡಿರುವ ಮಾತುಗಳಿಗೆ ಏನು ಪ್ರತಿಕ್ರಿಸುತ್ತೀರಿ?' ಎಂದು ಅಖಿಲೇಶ್‌ ಯಾದವ್‌ ಅವರಿಗೆ ಮೌರ್ಯ ಟಾಂಗ್‌ ನೀಡಿದ್ದಾರೆ.

ಮುಲಾಯಂ ಸಿಂಗ್‌ ಅವರನ್ನು ಐಎಸ್‌ಐ ಏಜೆಂಟ್‌ ಎಂದಿದ್ದ ವ್ಯಕ್ತಿಯನ್ನು ಬೆಂಬಲಿಸುವ ಮೂಲಕ ಅಖಿಲೇಶ್‌ ಯಾದವ್‌ ಅವರು ತಮ್ಮ 'ಸಂಸ್ಕಾರ' ಏನು ಎಂಬುದನ್ನು ಜನತೆಯ ಮುಂದೆ ತೆರೆದಿಟ್ಟಿದ್ದಾರೆ ಎಂದು ಪಾಠಕ್‌ ಅವರು ಟೀಕಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಎಸ್‌ಪಿ, 'ಪ್ರಚಾರಜೀವಿ ಡಿಸಿಎಂ ಕೇಶವ ಪ್ರಸಾದ್‌ ಮೌರ್ಯ ಮತ್ತು ಬ್ರಜೇಶ್‌ ಪಾಠಕ್‌ ಅವರೇ, ಸ್ವಾತಂತ್ರ್ಯ ಹೋರಾಟದಲ್ಲಿ ನಿಮ್ಮ ಪಕ್ಷದ ಪಾತ್ರವೇನು? ಎಂಬುದನ್ನು ತಿಳಿಸಿ' ಎಂದು ತಿರುಗೇಟು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.