ADVERTISEMENT

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಇಂದು: ಪಂಚರಾಜ್ಯ ಚುನಾವಣೆಗೆ ಕಾರ್ಯತಂತ್ರ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 1:32 IST
Last Updated 7 ನವೆಂಬರ್ 2021, 1:32 IST
ಜೆ.ಪಿ.ನಡ್ಡಾ, ನರೇಂದ್ರ ಮೋದಿ, ಅಮಿತ್‌ ಶಾ
ಜೆ.ಪಿ.ನಡ್ಡಾ, ನರೇಂದ್ರ ಮೋದಿ, ಅಮಿತ್‌ ಶಾ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಪ್ರಮುಖರು ಇಂದು(ಭಾನುವಾರ)ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇತ್ತೀಚೆಗಷ್ಟೇ ನಡೆದ ವಿವಿಧ ರಾಜ್ಯಗಳ ವಿಧಾನಸಭೆಯ 30 ಹಾಗೂ ಲೋಕಸಭೆಯ 3 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮಿಶ್ರ ಫಲಿತಾಂಶದ ಆತ್ಮಾವಲೋಕನ ಹಾಗೂ ಮುಂದಿನ ವರ್ಷಾರಂಭಕ್ಕೆ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಕೊರೊನಾ ಸಾಂಕ್ರಾಮಿಕದಲ್ಲಿ ಸಾವಿಗೀಡಾಗಿರುವ ಲಕ್ಷಾಂತರ ಜನರಿಗೆ ಸಂತಾಪ ಸೂಚಕ ನಿರ್ಣಯವನ್ನು ಅಂಗೀಕರಿಸುವುದಲ್ಲದೆ, ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಕುರಿತ ವಿಶೇಷ ಚಿಂತನ– ಮಂಥನವೂ ಸಭೆಯಲ್ಲಿ ನಡೆಯಲಿದೆ.

ADVERTISEMENT

ಕೋವಿಡ್‌ ಸಂದರ್ಭದ ಅಸಮರ್ಪಕ ನಿರ್ವಹಣೆಯ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಎದ್ದಿರುವ ಆಡಳಿತ ವಿರೋಧಿ ಅಲೆಯನ್ನು ನೀಗಿಸುವ ಕುರಿತೂ ಕೋವಿಡ್ ನಂತರ ನಡೆಯಲಿರುವ ಪಕ್ಷದ ಮೊದಲ ಕಾರ್ಯಕಾರಿಣಿಯಲ್ಲಿ ಚರ್ಚೆಗೆ ಒಳಗಾಗುವ ಪ್ರಮುಖ ಅಂಶವಾಗಿದೆ.

ಸಮಾಜದ ಎಲ್ಲ ವರ್ಗಗಳನ್ನೂ ಪಕ್ಷಕ್ಕೆ ಸೆಳೆಯುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ನಿಯಮ ರೂಪಿಸುವ ನಿರ್ಣಯವನ್ನೂ ಕೈಗೊಳ್ಳಬಹುದಾಗಿದೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡೇ ಕೇದಾರನಾಥ ದೇವಾಲಯದ ಪುನರ್‌ ನಿರ್ಮಾಣ, ಕಾಶಿ ವಿಶ್ವನಾಥ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳ ನವೀಕರಣ ಹಾಗೂ ಅಯೋಧ್ಯೆಯ ರಾಮ ಮಂದಿರದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿರುವಂಥ ಪ್ರಮುಖ ನಿರ್ಧಾರಗಳು ಪಕ್ಷಕ್ಕೆ ಯಾವ ರೀತಿ ಸಹಕಾರಿ ಆಗಲಿವೆ ಎಂಬುದೂ ಸಭೆಯ ಮಹತ್ವದ ಚರ್ಚಿತ ವಿಷಯವಾಗಲಿದೆ.

ಕೋವಿಡ್‌ ಸಂದರ್ಭ ಬಿಜೆಪಿ ಕಾರ್ಯಕರ್ತರು ತಮ್ಮ ಪ್ರಾಣದ ಹಂಗನ್ನು ತೊರೆದು ದೇಶದಾದ್ಯಂತ ಸೇವೆ ಸಲ್ಲಿಸಿದ್ದು, 100 ಕೋಟಿ ಡೋಸ್‌ ಕೊರೊನಾ ಲಸಿಕೆಯ ಗುರಿ ಸಾಧಿಸಿರುವದೂ ಸರ್ಕಾರದ ಸಾಧನೆ ಎಂದು ಸಭೆಗೆ ಮುನ್ನ ಪಕ್ಷ ಬಿಡುಗಡೆ ಮಾಡಿರುವ ಹೇಳಿಕೆಯಾಗಿದೆ.

ಸಾಂಕ್ರಾಮಿಕದ ಸಂದರ್ಭ ದೇಶದ ಬಡವರಿಗೆ ಒಂದೂವರೆ ವರ್ಷ ಉಚಿತ ಪಡಿತರ ವಿತರಣೆ, ಮಹಿಳೆಯರು, ರೈತರು, ಹಿರಿಯ ನಾಗರಿಕರು, ವಿಧವೆಯರು ಮತ್ತು ವಿಶೇಷಚೇತನರ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮದ ಕುರಿತು ಸಭೆಯಲ್ಲಿ ಬಹಿರಂಗಪಡಿಸುವ ಸ್ಪಷ್ಟ ಸೂಚನೆಯನ್ನು ಈ ಹೇಳಿಕೆ ನೀಡಿದೆ.

ಬೆಳಿಗ್ಗೆ 10ರಿಂದ ಸತತ ಐದು ಗಂಟೆ ನಡೆಯಲಿರುವ ಸಭೆಯಲ್ಲಿ 124 ಜನ ಮುಖಂಡರು ನೇರವಾಗಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಆಯಾ ರಾಜ್ಯದಲ್ಲಿರುವ ಪಕ್ಷದ ಕಚೇರಿಯಿಂದಲೇ ಭಾಗವಹಿಸಲಿದ್ದಾರೆ.

ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪ್ರಾಸ್ತಾವಿಕದೊಂದಿಗೆ ಆರಂಭವಾಗಲಿರುವ ಸಭೆಯು, ಪ್ರಧಾನಿ ಮೋದಿ ಅವರ ಭಾಷಣದೊಂದಿಗೆ ಅಂತ್ಯವಾಗಲಿದೆ. ಕೇಂದ್ರದ ಸಚಿವರಾದ ಅಮಿತ್ ಶಾ, ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಪೀಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್ ಸಭೆಯಲ್ಲಿ ಭಾಗವಹಿಸುವ ಪ್ರಮುಖರಾಗಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಶನಿವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.