ಮುಂಬೈ: ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮತ್ತೊಬ್ಬ ಮೊಮ್ಮಗ ಆನಂದರಾಜ್ ಅಂಬೇಡ್ಕರ್ ನೇತೃತ್ವದ ರಿಪಬ್ಲಿಕನ್ ಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಆನಂದರಾಜ್ ಅಂಬೇಡ್ಕರ್ ಮತ್ತು ಏಕನಾಥ್ ಶಿಂಧೆ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಮೈತ್ರಿ ಘೋಷಣೆ ಮಾಡಿದರು. ಏಕನಾಥ್ ಶಿಂಧೆ ಅವರು ಮುಂಬೈ ಸೇರಿದಂತೆ ನಗರ ಪ್ರದೇಶಗಳಲ್ಲಿ ದಲಿತ ಮತಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಈ ಮೈತ್ರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮುಂಬರುವ ಚುನಾವಣೆಗಳಲ್ಲಿ ಆನಂದರಾಜ್ ಅಂಬೇಡ್ಕರ್ ನೇತೃತ್ವದ ರಿಪಬ್ಲಿಕನ್ ಸೇನೆಯೊಂದಿಗೆ ಕೈಜೋಡಿಸಲು ನಾವು ಹೆಮ್ಮೆಪಡುತ್ತೇವೆ. ಈ ಮೈತ್ರಿ ಸಾಮಾಜಿಕ ನ್ಯಾಯದ ಬದ್ಧತೆಗಾಗಿ ಶ್ರಮಿಸಲಿದೆ. ಅಭಿವೃದ್ದಿ ಮತ್ತು ತಳ ಸಮುದಾಯದವರಿಗೆ ಧ್ವನಿಯಾಗಿ ನಾವು ಕೆಲಸ ಮಾಡುತ್ತೇವೆ ಎಂದು ಶಿಂಧೆ ಹೇಳಿದರು.
ಇದು ಐತಿಹಾಸಿಕ ಕ್ಷಣ, ಈ ಮೈತ್ರಿ ದಲಿತರು ಮತ್ತು ಸಾಮಾನ್ಯ ಜನರನ್ನು ಪ್ರತಿನಿಧಿಸುವ ಪರ್ಯಾಯ ರಾಜಕಾರಣ ಎಂದು ಆನಂದರಾಜ್ ಅಂಬೇಡ್ಕರ್ ಹೇಳಿದರು.
ಮುಂಬೈ ಮತ್ತು ಇತರ ನಗರಗಳಲ್ಲಿನ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪರಿಷತ್ ಚುನಾವಣೆಗಳಲ್ಲಿ ಈ ಮೈತ್ರಿಯು ನಿರ್ಣಾಯಕ ಪಾತ್ರವಹಿಸುವ ನಿರೀಕ್ಷೆಯಿದೆ. ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ನಡುವಿನ ಮೈತ್ರಿ ಬಗೆಗಿನ ವದಂತಿಗಳ ಬೆನ್ನಲೇ ಈ ಮೈತ್ರಿ ಘೋಷಣೆಯಾಗಿದೆ.
ಬಹುಜನ ಅಘಾಡಿ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಅವರ ಕಿರಿಯ ಸಹೋದರರಾಗಿರುವ ಆನಂದರಾಜ್ ದಶಕಗಳ ಹಿಂದೆ ಚುನಾವಣಾ ಕಣಕ್ಕೆ ಇಳಿದಿದ್ದರು. ಅಮರಾವತಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು, ಆದರೆ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.