ನವದೆಹಲಿ: ‘ಬಿಜೆಪಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೇರಿಕೊಂಡು ಬಿಹಾರವನ್ನು ದೇಶದ ಅಪರಾಧಗಳ ರಾಜಧಾನಿಯನ್ನಾಗಿ ಮಾಡಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಿಹಾರದ ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಪಾಟ್ನಾದ ಅವರ ಮನೆಯ ಹೊರಭಾಗದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವುದನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.
‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನವು ಕೇವಲ ಸರ್ಕಾರವನ್ನಷ್ಟೇ ಬದಲಾಯಿಸುವುದಿಲ್ಲ, ರಾಜ್ಯವನ್ನೂ ಉಳಿಸಲಿದೆ’ ಎಂದು ಹೇಳಿದ್ದಾರೆ.
ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗಾಂಧಿ ಮೈದಾನದ ಸಮೀಪವಿರುವ ನಿವಾಸಕ್ಕೆ ತೆರಳಲು ಖೇಮ್ಕಾ ಅವರು ಕಾರಿನಿಂದ ಇಳಿಯುತ್ತಿದ್ದ ವೇಳೆ ಶುಕ್ರವಾರ ರಾತ್ರಿ 11.40ರ ಸುಮಾರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹಾಜೀಪುರದಲ್ಲಿ ಏಳು ವರ್ಷಗಳ ಹಿಂದೆ ಅವರ ಮಗನನ್ನು ಇದೇ ರೀತಿ ಕೊಲೆ ಮಾಡಲಾಗಿತ್ತು.
‘ಘಟನೆ ನಡೆದ ಬೆನ್ನಲ್ಲೇ, ಪ್ರಕರಣದ ತನಿಖೆ ನಡೆಸಲು ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ’ ಎಂದು ಡಿಜಿಪಿ ತಿಳಿಸಿದ್ದಾರೆ.
ಬಿಹಾರ ಉಳಿಸಿ: ‘ಬಿಜೆಪಿ, ನಿತೀಶ್ ಕುಮಾರ್ ಸೇರಿಕೊಂಡು, ಬಿಹಾರವನ್ನು ದೇಶದ ಅಪರಾಧ ರಾಜಧಾನಿಯನ್ನಾಗಿ ಮಾಡಿದ್ದಾರೆ. ಬಿಹಾರ ಇಂದು ಲೂಟಿ, ಗುಂಡಿನ ದಾಳಿ ಹಾಗೂ ಕೊಲೆಗಳ ನೆರಳಿನಲ್ಲಿ ಬದುಕುತ್ತಿದೆ. ಅಪರಾಧ ಎಂಬುದು ಮಾಮೂಲಿಯಾಗಿದೆ. ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಈ ವರ್ಷದ ಅಕ್ಟೋಬರ್– ಡಿಸೆಂಬರ್ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಕೊಲೆ ನಡೆದಿರುವುದು ಆರೋಪ– ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.