ADVERTISEMENT

63 ಲಕ್ಷ ಮನೆಗಳ ಕೆಡವಲು ಬಿಜೆಪಿ ಯೋಜನೆ: ಮನೀಶ್ ಸಿಸೋಡಿಯಾ ಆರೋಪ

ಪಿಟಿಐ
Published 13 ಮೇ 2022, 6:17 IST
Last Updated 13 ಮೇ 2022, 6:17 IST
ದೆಹಲಿ ನಗರ ಪಾಲಿಕೆ ಗುರುವಾರ ಕೈಗೊಂಡಿದ್ದ ಅಕ್ರಮ ನಿರ್ಮಾಣ ತೆರವು ಕಾರ್ಯಾಚರಣೆಯ ದೃಶ್ಯ – ಪಿಟಿಐ ಚಿತ್ರ
ದೆಹಲಿ ನಗರ ಪಾಲಿಕೆ ಗುರುವಾರ ಕೈಗೊಂಡಿದ್ದ ಅಕ್ರಮ ನಿರ್ಮಾಣ ತೆರವು ಕಾರ್ಯಾಚರಣೆಯ ದೃಶ್ಯ – ಪಿಟಿಐ ಚಿತ್ರ   

ನವದೆಹಲಿ: ದೆಹಲಿಯ ಅನಧಿಕೃತ ಕಾಲೊನಿಗಳು, ಕೊಳೆಗೇರಿಗಳಲ್ಲಿರುವ 63 ಲಕ್ಷ ಮನೆಗಳನ್ನು ಕೆಡವಲು ಕೇಂದ್ರದ ಬಿಜೆಪಿ ಸರ್ಕಾರ ಉದ್ದೇಶಿಸಿದೆ. ಅವರ (ಬಿಜೆಪಿ) ‘ಬುಲ್ಡೋಜರ್’ ನೀತಿಯನ್ನು ಎಎಪಿ ಸರ್ಕಾರ ವಿರೋಧಿಸುತ್ತದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಎಎಪಿ ಸರ್ಕಾರವು ನಿಮ್ಮ ಜತೆಗಿರಲಿದೆ ಎಂದು ದೆಹಲಿಯ ಜನತೆಗೆ ನಾನು ಭರವಸೆ ನೀಡುತ್ತೇನೆ. ಬಿಜೆಪಿಯ ತೆರವು ಕಾರ್ಯಾಚರಣೆ ವಿರುದ್ಧ ಜೈಲಿಗೆ ಹೋಗಲೂ ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.

ಜನರಿಂದ ಹಣ ವಸೂಲಿ ಮಾಡಲು ದೆಹಲಿಯಲ್ಲಿ ಬಿಜೆಪಿ ನಡೆಸುತ್ತಿರುವ ತೆರವು ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.

ಭಾರಿ ವಿರೋಧದ ನಡುವೆಯೂ ಗುರುವಾರವೂ ತೆರವು ಕಾರ್ಯಾಚರಣೆ ಮುಂದುವರಿದಿತ್ತು. ಉತ್ತರ ದೆಹಲಿ ಮಹಾನಗರಪಾಲಿಕೆ ಮತ್ತು ದಕ್ಷಿಣ ದೆಹಲಿ ಮಹಾನಗರಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಗುರುವಾರ ನಡೆಸಿದ್ದವು. ಈ ವೇಳೆ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಕಲ್ಲುತೂರಾಟ ಮತ್ತು ಲಾಠಿ ಪ್ರಹಾರವೂ ನಡೆದಿತ್ತು. ಮದನ್‌ಪುರ್‌ ಖಾದರ್‌ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಎಪಿ ಶಾಸಕ ಅಮಾನತುಲ್ಲಾ ಖಾನ್‌ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.