ADVERTISEMENT

ಭಿನ್ನಮತೀಯರಿಗೆ ಶಾಸ್ತಿ: ಬಿಜೆಪಿ ವರಿಷ್ಠರ ಆಲೋಚನೆ

ನಾಯಕತ್ವ ಬದಲಾವಣೆ ವದಂತಿ ಹಬ್ಬಿಸದಂತೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 23:51 IST
Last Updated 2 ಜೂನ್ 2021, 23:51 IST
ಜೆ.ಪಿ.ನಡ್ಡಾ, ಅಮಿತ್‌ ಶಾ
ಜೆ.ಪಿ.ನಡ್ಡಾ, ಅಮಿತ್‌ ಶಾ   

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಡಳಿತದ ವೈಖರಿಯ ವಿರುದ್ಧ ಹೇಳಿಕೆ ನೀಡುತ್ತ, ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿರುವವರಿಗೆ ತಕ್ಕ ಶಾಸ್ತಿ ಮಾಡಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ.

ಎರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿರುವ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಜೊತೆ ಬುಧವಾರ ಚರ್ಚಿಸಿರುವ ವರಿಷ್ಠರು, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಜೆಎಸ್‌ಡಬ್ಲ್ಯೂ ಸ್ಟೀಲ್ಸ್‌ ಕಂಪನಿಗೆ ಭೂಮಿ ಪರಭಾರೆ ಮಾಡದಿರುವ ತೀರ್ಮಾನ ಕೈಗೊಂಡಿರುವುದೂ ಒಳಗೊಂಡಂತೆ, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತೂ ವಿಜಯೇಂದ್ರ ಅವರಿಂದ ಮುಖಂಡರು ಮಾಹಿತಿ ಪಡೆದಿದ್ದಾರೆ.

ADVERTISEMENT

ಬಣ ರಾಜಕೀಯದ ಮೂಲಕ ಯಡಿಯೂರಪ್ಪ ಆಡಳಿತದ ಬಗ್ಗೆ ಗೊಂದಲ ಉಂಟು ಮಾಡುತ್ತಿರುವ ಶಾಸಕರು, ಸಚಿವರ ವಿರುದ್ಧ ವರಿಷ್ಠರು ಕೆಲವೇ ದಿನಗಳಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೆಲವರು, ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ’ ಎಂಬ ವದಂತಿ ಹಬ್ಬಿಸುತ್ತಿರುವುದರಿಂದ ಜನರಿಗೆ ಆಡಳಿತದ ಬಗ್ಗೆ ವಿಶ್ವಾಸವೇ ಮೂಡದ ಸ್ಥಿತಿ ಉಂಟಾಗಿದೆ. ಅಂಥವರೇ ಹೈಕಮಾಂಡ್‌ನ ಕೆಂಗಣ್ಣಿಗೆ ಗುರಿಯಾಗಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ಬಹಿರಂಗಪಡಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸಿ, ಬೇರೆಯವರಿಗೆ ಜವಾಬ್ದಾರಿ ವಹಿಸುವ ಪ್ರಸ್ತಾವವೇ ಇಲ್ಲ. ಬದಲಿಗೆ, ಕೊರೊನಾ ಸ್ಥಿತಿಯ ನಿರ್ವಹಣೆ ವಿಷಯದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಲು ಕಾರಣವಾಗಿರುವ ಪ್ರಮುಖ ಪದಾಧಿಕಾರಿಗಳನ್ನು ಬದಲಿಸಿ, ಪಕ್ಷಕ್ಕೆ ಪುನಶ್ಚೇತನ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸಚಿವ ಸಂಪುಟದ ಪುನರ್‌ ರಚಿಸುವಂತೆಯೂ ಯಡಿಯೂರಪ್ಪ ಅವರಿಗೆ ಸೂಚಿಸಿರುವ ಹೈಕಮಾಂಡ್‌, ನಿಷ್ಕ್ರಿಯ ಸಚಿವರನ್ನು ಕೈಬಿಡುವ ಮೂಲಕ ಉತ್ಸಾಹಿ ಯುವಕರಿಗೆ ಅವಕಾಶ ನೀಡುವಂತೆ ತಿಳಿಸಲಿದೆ. ಇನ್ನೂ ಕೆಲವು ಹಿರಿಯರನ್ನು ಸಂಪುಟದಿಂದ ಕೈಬಿಟ್ಟು, ಪಕ್ಷ ಸಂಘಟನೆಯ ಹೊಣೆ ವಹಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

‘ವಿಜಯ’ನಗರ ಪತನ; ಸಿ.ಟಿ. ರವಿ ಗೂಢಾರ್ಥ ಕಥನ?

ಬೆಂಗಳೂರು: ವಿಜಯನಗರ ಸಾಮ್ರಾಜ್ಯದ ಕೊನೆಯ ಅರಸ ಅಳಿಯ ರಾಮರಾಯನ ವೈಭೋಗದ ಜೀವನ, ಸ್ವಾರ್ಥ ಕೇಂದ್ರಿತ ಅಧಿಕಾರ ಮತ್ತು ಅಂತ್ಯದ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ.

ರವಿ ಹೇಳಿರುವ ಕತೆಯನ್ನು ಇಂದಿನ ರಾಜಕಾರಣಕ್ಕೆ ಹೋಲಿಸಿರುವ ಕೆಲವರು, ಇದರ ಹಿಂದಿನ ಗೂಢಾರ್ಥ ಹುಡುಕುವ ಯತ್ನವನ್ನೂ ಮಾಡಿದ್ದಾರೆ. ಅಳಿಯ ರಾಮರಾಯನ ಆಡಳಿತವನ್ನು ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಆಡಳಿತಕ್ಕೆ ಕೆಲವರು ಸಮೀಕರಿಸಿದ್ದರೆ, ಮತ್ತೆ ಕೆಲವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಹೇಳಿದ್ದೀರಾ ಎಂದು ಕಾಲೆಳೆದಿದ್ದಾರೆ.

ರವಿ ಹೇಳಿರುವುದೇನು?: ‘ಮರೆಯಲಾಗದ ಮಹಾ ಸಾಮ್ರಾಜ್ಯ’ ವಿಜಯನಗರದ ಏಳುಬೀಳುಗಳ ಕಥೆ ಓದುತ್ತಿದ್ದೆ ವಿ.ನಾಗರಾಜ್‌ ಹೇಳಿದ ‘ಅಳಿಯ ರಾಮರಾಯ’ನ ಕಥೆ ನೆನಪಾಯಿತು.

‘ರಾಮರಾಯ ಹಲವು ಯುದ್ಧಗಳನ್ನು ಗೆದ್ದ ಅಪ್ರತಿಮ ಸಾಹಸಿ, ಕೂಟ ನೀತಿಯಲ್ಲಿ ನಿಪುಣ. ಆತನ ಸಮಸ್ಯೆಯೆಂದರೆ ಎಲ್ಲರ ಮೇಲೂ ಅನುಮಾನ. ಆಯಕಟ್ಟಿನ ಜಾಗಗಳಲ್ಲಿ ಇದ್ದ ಸಾಮ್ರಾಜ್ಯ ನಿಷ್ಠರನ್ನು ಹೊರನೂಕಿ, ಆ ಜಾಗದಲ್ಲಿ ತನ್ನ ಹೊಗಳು ಭಟರನ್ನು ನೇಮಕ ಮಾಡಿದ. ಎಲ್ಲಡೆ ಅವರದ್ದೇ ಕಾರುಬಾರು. ಆಯಕಟ್ಟಿನ ಜಾಗದಲ್ಲಿ ಇರಬೇಕಾದವರು ರಾಜಧಾನಿಯಲ್ಲಿ ಸ್ಥಿರರಾದರು. ಸಾಮ್ರಾಜ್ಯದ ನೈಜ ವಿಚಾರಗಳನ್ನು ರಾಜನಿಗೆ ತಲುಪಿಸುತ್ತಿದ್ದವರು ಮೂಲೆಗುಂಪಾದರು. ಭಟ್ಟಂಗಿಗಳು ರಾಮರಾಯ ಕೇಳ ಬಯಸುವ ಮಾತುಗಳನ್ನಷ್ಟೇ ಹೇಳಲಾರಂಭಿಸಿದರು. ನೈಜ ಸಂಗತಿ ಮರೆಮಾಚಿದರು’.

‘ರಾಮರಾಯ ನಂಬಬೇಕಾದವರನ್ನು ನಂಬಲಿಲ್ಲ. ಸ್ವಾರ್ಥ ಕೇಂದ್ರಿತ ಅಧಿಕಾರ ಜನಮಾನಸದಲ್ಲಿ ಬಿತ್ತಿದ ಅಸಹನೆಯ ಬೀಜ ನಿಧಾನಕ್ಕೆ ಮರವಾಯಿತು. ಇದೇ ಸಮಯಕ್ಕೆ ಬಿಜಾಪುರದ ಆದಿಲ್‌ಶಾಹಿಗಳ ನೇತೃತ್ವದಲ್ಲಿ ವಿರೋಧಿಗಳು ಒಗ್ಗೂಡಿದರು. ತಪ್ಪು ಯುದ್ಧ ನೀತಿ, ಮೈಮರೆವು, ವೃದ್ಧಾಪ್ಯ, ತತ್ವಹೀನ ರಾಜಕಾರಣ, ಸಾಮ್ರಾಜ್ಯ ವಿರೋಧಿಗಳನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿದ ಫಲ, ಅವರೆಲ್ಲ ಯುದ್ಧಕಾಲದಲ್ಲಿ ಕೈ ಕೊಟ್ಟರು’.

ಆದಿಲ್‌ಶಾಹಿ ಸೈನ್ಯದ ಮೂರು ಪಟ್ಟು ದೊಡ್ಡ ಸೈನ್ಯವಿದ್ದರೂ ತಾಳಿಕೋಟೆ, ರಕ್ಕಸತಂಗಡಿಯ ಯುದ್ಧದಲ್ಲಿ ವಿಜಯನಗರ ಅರಸು ಸೋಲಬೇಕಾಯಿತು. ದಿಕ್ಕೆಟ್ಟ ರಾಮರಾಯನನ್ನು ಮೋಸದಿಂದ ಕೊಂದು, ಭರ್ಜಿಯಲ್ಲಿ ರುಂಡ ಹಿಡಿದಾಕ್ಷಣ ವಿಜಯನಗರ ಸೇನೆ ದಿಕ್ಕೆಟ್ಟು ಓಡಿತು. ಸೇನೆ ಮುನ್ನಡೆಸುವ ನಾಯಕ ಇಲ್ಲದೆ ಸೇನೆಯೂ ದಿಕ್ಕಾಪಾಲಾಯಿತು.

‘ಈ ಕ್ಷಣದಲ್ಲಿ ಭಟ್ಟಂಗಿಗಳ ಬದಲು ಸಾಮ್ರಾಜ್ಯ ನಿಷ್ಠನೊಬ್ಬ ಸೈನ್ಯವನ್ನು ಮುನ್ನಡೆಸಿದ್ದರೆ ಇತಿಹಾಸದ ಗತಿಯೇ ಬದಲಾಗುತ್ತಿತ್ತು. ವ್ಯಕ್ತಿಗತ ಲಾಭಕ್ಕೆ ಆಯಕಟ್ಟಿನ ಸ್ಥಳದಲ್ಲಿದ್ದವರೆಲ್ಲ ರಾಮರಾಯನ ಸಾವಿನ ನಂತರ ತಮ್ಮ ಕುಟುಂಬವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಕೈಗೆ ಸಿಕ್ಕಿದ್ದನ್ನು ತುಂಬಿಕೊಂಡು ಹೊರಟರು.

ಇತಿಹಾಸದಿಂದ ಪಾಠ ಕಲಿಯಬೇಕಾದ ನಾವು ಎಷ್ಟು ಕಲಿತಿದ್ದೇವೆ? ಪ್ರಜೆಗಳನ್ನು ಬಲಿಗೊಟ್ಟು, ಭಟ್ಟಂಗಿಗಳು ಕೋಟೆಯೊಳಗಿದ್ದರೆ ಸಾಮ್ರಾಜ್ಯ ಎಷ್ಟು ದಿನ ಉಳಿದೀತು? ಮರೆಯಲಾಗದ ಮಹಾ ಸಾಮ್ರಾಜ್ಯ ಪತನ ನಮಗೆ ಪಾಠ ಕಲಿಸಲಾರದೆ? ಹೇ ವಿರೂಪಾಕ್ಷ ನೀನೇ ರಕ್ಷಿಸು ಅನವರತ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.