ADVERTISEMENT

ಬಿಜೆಪಿಗೆ ದಕ್ಷಿಣದ ಮಹಿಳೆ ಸಾರಥ್ಯ?: ನಿರ್ಮಲಾ ಸೇರಿದಂತೆ ಮೂವರ ಹೆಸರು ಮುಂಚೂಣಿಗೆ

ಪಿಟಿಐ
Published 5 ಜುಲೈ 2025, 0:43 IST
Last Updated 5 ಜುಲೈ 2025, 0:43 IST
<div class="paragraphs"><p>ನಿರ್ಮಲಾ ಸೀತಾರಾಮನ್‌, ಡಿ.ಪುರಂದೇಶ್ವರಿ,&nbsp;ವನತಿ ಶ್ರೀನಿವಾಸನ್‌</p></div>

ನಿರ್ಮಲಾ ಸೀತಾರಾಮನ್‌, ಡಿ.ಪುರಂದೇಶ್ವರಿ, ವನತಿ ಶ್ರೀನಿವಾಸನ್‌

   

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಈ ಸಲ ಮಹಿಳಾ ನಾಯಕಿಯೊಬ್ಬರನ್ನು ನೇಮಿಸುವ ಸಂಭವ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಮೂವರ ಹೆಸರು ಮುಂಚೂಣಿಗೆ ಬಂದಿದೆ.

ನೂತನ ಅಧ್ಯಕ್ಷರ ನೇಮಕದ ಸಂಬಂಧ ಪಕ್ಷದ ಉನ್ನತ ನಾಯಕರು ಸರಣಿ ಸಮಾಲೋಚನೆಗಳನ್ನು ನಡೆಸಿದ್ದಾರೆ. ಇದೀಗ, ಪಕ್ಷದ ಉನ್ನತ ಹುದ್ದೆಗೆ ನಿರ್ಮಲಾ ಸೀತಾರಾಮನ್‌, ಕೇಂದ್ರದ ಮಾಜಿ ಸಚಿವೆ ಡಿ.ಪುರಂದೇಶ್ವರಿ ಹಾಗೂ ತಮಿಳುನಾಡಿನ ಶಾಸಕಿ ವನತಿ ಶ್ರೀನಿವಾಸನ್‌ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಕಮಲ ಪಾಳಯದ ನಾಯಕರ ಈ ಪ್ರಸ್ತಾವಕ್ಕೆ ಆರ್‌ಎಸ್‌ಎಸ್‌ ಪ್ರಮುಖರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ADVERTISEMENT

ಈ ವರ್ಷಾಂತ್ಯದಲ್ಲಿ ಬಿಹಾರ, ಮುಂದಿನ ವರ್ಷ ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಸಂಘಟನಾತ್ಮಕ ಹಾಗೂ ಕಾರ್ಯತಂತ್ರದಲ್ಲಿ ಎಷ್ಟೇ ಕಸರತ್ತು ನಡೆಸಿದರೂ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಪ್ರಬಲವಾಗಿ ನೆಲೆಯೂರಲು ಸಾಧ್ಯವಾಗಿಲ್ಲ. ಈ ಸಲ ದಕ್ಷಿಣ ಭಾರತದವರಿಗೆ ಅಧ್ಯಕ್ಷ ಗಾದಿ ನೀಡಲು ಪಕ್ಷ ಚಿಂತನೆ ನಡೆಸಿದೆ. ಜತೆಗೆ, ಪಕ್ಷವು ಇಲ್ಲಿಯವರೆಗೆ ಮಹಿಳಾ ಅಧ್ಯಕ್ಷರನ್ನು ಕಂಡಿಲ್ಲ. 

ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಮುನ್ನ ಶೇ 50 ರಾಜ್ಯಗಳಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಈ ವಾರ ಆರು ರಾಜ್ಯಗಳಲ್ಲಿ ರಾಜ್ಯ ಘಟಕದ ಅಧ್ಯಕ್ಷರ ಚುನಾವಣೆ ಮುಗಿದಿದೆ. ಈ ಮೂಲಕ, 22 ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ. ಇದರಿಂದಾಗಿ, ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗೆ ಹಾದಿ ಸುಗಮಗೊಂಡಿದೆ. ಸಂಸತ್‌ ಅಧಿವೇಶನ ಆರಂಭವಾಗುವ ಮುನ್ನ ಈ ಪ್ರಕ್ರಿಯೆ ಪೂರ್ಣಗೊಳಿಸಲು ಬಿಜೆಪಿ ಯೋಜಿಸಿದೆ. 

ಪಕ್ಷದ ಕೇಂದ್ರ ಕಚೇರಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದರು. ಅವರ ವ್ಯಾಪಕ ಅನುಭವ ಹಾಗೂ ನಾಯಕತ್ವ ಸಾಮರ್ಥ್ಯವನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಪಕ್ಷ ಬಯಸಿದೆ. 

ಹರಿಯಾಣ, ಮಹಾರಾಷ್ಟ್ರ ಹಾಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭೂತಪೂರ್ವ ಗೆಲುವಿಗೆ ಮಹಿಳಾ ಮತದಾರರು ಕೈ ಹಿಡಿದಿದ್ದು ಪ್ರಮುಖ ಕಾರಣ. ಮಹಿಳೆಯರಿಗೆ ಶೇ 33 ಮೀಸಲಾತಿ ನೀಡುವ ಮಸೂದೆಗೆ ಸಂಸತ್‌ನಲ್ಲಿ 2023ರಲ್ಲಿ ಒಪ್ಪಿಗೆ ಸಿಕ್ಕಿದೆ. ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಗಿದ ಬಳಿಕ ಶೇ 33 ಮೀಸಲಾತಿ ಜಾರಿಗೆ ಬರಲಿದೆ. ಮಹಿಳಾ ಮತ ಬ್ಯಾಂಕ್‌ ಅನ್ನು ಭದ್ರಪಡಿಸಲು ಇನ್ನೊಂದು ಪ್ರಯೋಗಕ್ಕೆ ಕಮಲ ‍ಪಾಳಯ ಮುಂದಾಗಿದೆ. 

ನಿರ್ಮಲಾ ಸೀತಾರಾಮನ್‌:

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಈ ಹಿಂದೆ ರಕ್ಷಣಾ ಸಚಿವರಾಗಿದ್ದರು. 2019ರಿಂದ ಹಣಕಾಸು ಸಚಿವರಾಗಿದ್ದಾರೆ. ನಿರ್ಮಲಾ ಮೂಲತಃ ತಮಿಳುನಾಡಿನವರು. ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದರೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಅನುಕೂಲವಾಗಬಹುದು ಎಂಬುದು ಪಕ್ಷದ ಅಧಿನಾಯಕರ ಲೆಕ್ಕಾಚಾರ. 

ಡಿ.ಪುರಂದೇಶ್ವರಿ:

ಯುಪಿಎ ಸರ್ಕಾರದಲ್ಲಿ ಅವರು ಕೇಂದ್ರ ಸಚಿವರಾಗಿದ್ದರು. ಆಂಧ್ರ ಪ್ರದೇಶದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷೆ. ಲೋಕಸಭಾಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. 

ವನತಿ ಶ್ರೀನಿವಾಸನ್‌:

ವಕೀಲೆಯಾಗಿರುವ ವನತಿ ಅವರು ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ. 1993ರಲ್ಲಿ ಬಿಜೆಪಿಗೆ ಸೇರಿದ್ದ ಅವರು ಪಕ್ಷದ ರಾಜ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ 2020ರಲ್ಲಿ ನೇಮಿಸಲಾಗಿತ್ತು. 2022ರಲ್ಲಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. 

ಜೆ.ಪಿ.ನಡ್ಡಾ ಅವರು ಪಕ್ಷದ ಅಧ್ಯಕ್ಷರಾಗಿ ನೇಮಕವಾಗಿದ್ದು 2020ರ ಜನವರಿಯಲ್ಲಿ. ಅವರ ಮೂರು ವರ್ಷಗಳ ಅಧಿಕಾರದ ಅವಧಿ 2023ರ ಜನವರಿಗೆ ಮುಗಿದಿತ್ತು. ಬಳಿಕ ಒಂದು ವರ್ಷ ಅವಧಿ ವಿಸ್ತರಿಸಲಾಗಿತ್ತು. ಲೋಕಸಭಾ ಚುನಾವಣಾ ಕಾರಣಕ್ಕೆ ಮತ್ತೆ ಆರು ತಿಂಗಳು ಅವಧಿ ವಿಸ್ತರಣೆ ಮಾಡಲಾಗಿತ್ತು. 2024ರಲ್ಲಿ ಅವರು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.