ADVERTISEMENT

ಪ್ರಧಾನಿ ನೀತಿಯಿಂದಾಗಿ ಹಣದುಬ್ಬರ ನಿಯಂತ್ರಣದಲ್ಲಿದೆ: ಬಿಜೆಪಿ

ಪಿಟಿಐ
Published 4 ಸೆಪ್ಟೆಂಬರ್ 2022, 9:15 IST
Last Updated 4 ಸೆಪ್ಟೆಂಬರ್ 2022, 9:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಣದುಬ್ಬರ ದರವನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.

ಪ್ರಧಾನಿ ನೀತಿಯಿಂದಾಗಿ ಹಣದುಬ್ಬರ ನಿಯಂತ್ರಣದಲ್ಲಿದೆ. ಜನತೆ ಕೂಡ ಇದನ್ನು ಮೆಚ್ಚಿದ್ದಾರೆ. ಆದರೆ ಕಾಂಗ್ರೆಸ್‌ಗೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದೆ.

ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತು. ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.

ರಾಜಸ್ಥಾನದ ರಾಜ್ಯ ಘಟಕದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ಜೈಪುರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನ ಉಸ್ತುವಾರಿ ಅರುಣ್ ಸಿಂಗ್, ಬೇರೆ ದೇಶಗಳಲ್ಲಿ ಹಣದುಬ್ಬರ ದರವು ಶೇ 20-25ಕ್ಕೆ ಏರಿಕೆಯಾಗಿದೆ. ಆದರೆ ಪ್ರಧಾನಿ ಮೋದಿಯ ದೂರದೃಷ್ಟಿ ಹಾಗೂ ನೀತಿಯಿಂದಾಗಿ ಹಣದುಬ್ಬರ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.

ಹಣದುಬ್ಬರವನ್ನು ಪ್ರಧಾನಿ ಮೋದಿ ನಿಯಂತ್ರಣಕ್ಕೆ ತಂದಿರುವುದರಿಂದ ದೇಶದಲ್ಲಿ ಸಮಸ್ಯೆ ಸೃಷ್ಟಿಯಾಗಿಲ್ಲ. ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಅಷ್ಟೇ ಅಲ್ಲದೆ ಅಮೆರಿಕ, ಬ್ರಿಟನ್‌ನಲ್ಲೂ ಹಣದುಬ್ಬರ ಏರಿಕೆಯಾಗಿದೆ. ಆದರೆ ಭಾರತದಲ್ಲಿ ಮಾತ್ರ ನಿಯಂತ್ರಣದಲ್ಲಿದೆ ಎಂದು ಸಮರ್ಥಿಸಿದರು.

ಸತ್ಯಾಂಶವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ತಯಾರಾಗಿಲ್ಲ. ಮಿಥ್ಯ ಆರೋಪಗಳನ್ನು ಹೊರಿಸುತ್ತಿದೆ ಎಂದು ದೂರಿದರು.

2027ರ ವೇಳೆಗೆ ನಮ್ಮ ದೇಶ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯುವತ್ತ ಸಾಗುತ್ತಿದ್ದೇವೆ. ಕೋವಿಡ್, ರಷ್ಯಾ-ಉಕ್ರೇನ್ ಸೇರಿದಂತೆ ಪ್ರತಿಕೂಲ ಪರಿಸ್ಥಿತಿಯಲ್ಲೂ ಮೋದಿ ಹಣದುಬ್ಬರ ನಿಯಂತ್ರಿಸಿದ ರೀತಿಯೂ ಇಡೀ ದೇಶದ ಜನತೆಯಿಂದ ಮೆಚ್ಚುಗೆ ಪಡೆದಿದೆ ಎಂದು ಹೇಳಿದರು.

ಬೆಲೆ ಏರಿಕೆ ಪ್ರತಿಭಟಿಸಿ ಕಾಂಗ್ರೆಸ್ ಭಾನುವಾರ ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.