ADVERTISEMENT

ಜಮ್ಮು- ಕಾಶ್ಮೀರದ ಸಮಸ್ಯೆಗಳು 'ಗಾಂಧಿ ಕುಟುಂಬದ ಪಾರಂಪರಿಕ ಬಳುವಳಿ': ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2021, 2:05 IST
Last Updated 11 ಸೆಪ್ಟೆಂಬರ್ 2021, 2:05 IST
ಸಂಬಿತ್‌ ಪಾತ್ರ, ರಾಹುಲ್‌ ಗಾಂಧಿ
ಸಂಬಿತ್‌ ಪಾತ್ರ, ರಾಹುಲ್‌ ಗಾಂಧಿ    

ನವದೆಹಲಿ: ಜಮ್ಮು- ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಒಡೆಯಲು ಬಿಜೆಪಿ- ಆರ್‌ಎಸ್‌ಎಸ್‌ ಯತ್ನಿಸುತ್ತಿವೆ ಎಂದು ಹೇಳಿಕೆ ನೀಡಿರುವ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದೆ.

ಜಮ್ಮು- ಕಾಶ್ಮೀರದ ಸಮಸ್ಯೆಗಳು 'ಗಾಂಧಿ ಕುಟುಂಬದ ಪಾರಂಪರಿಕ ಬಳುವಳಿ' ಎಂದು ಬಿಜೆಪಿ ಹರಿಹಾಯ್ದಿದೆ.

ಈ ಕುರಿತು ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿರುವ ಬಿಜೆಪಿ ಮುಖಂಡ ಸಂಬಿತ್‌ ಪಾತ್ರ, 'ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಶ್ಮೀರಿ ಪಂಡಿತರನ್ನು ಮಾತ್ರವಲ್ಲದೇ ಈ ಪ್ರದೇಶದ ಅಭಿವೃದ್ಧಿಯನ್ನೂ ಕಾಂಗ್ರೆಸ್ ಗಾಳಿಗೆ ತೂರಿದೆ' ಎಂದು ಆರೋಪಿಸಿದ್ದಾರೆ.

ADVERTISEMENT

ಕಾಶ್ಮೀರವನ್ನು ತೊರೆದು ಹೋಗಿದ್ದ ಪಂಡಿತರನ್ನು ಭೇಟಿ ಮಾಡಿರುವ ರಾಹುಲ್‌ ಗಾಂಧಿ ಪಂಡಿತರ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಆ ನಂತರ ಜಮ್ಮುವಿನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಅವರು, 'ನಾನು ಸ್ವತಃ ಕಾಶ್ಮೀರಿ ಪಂಡಿತರ ಸಮುದಾಯಕ್ಕೆ ಸೇರಿದವನು. ಅವರ ನೋವನ್ನು ನಾನೂ ಸಹ ಅನುಭವಿಸುತ್ತಿದ್ದೇನೆ' ಎಂದು ಹೇಳಿದ್ದರು. ಮುಂದುವರಿದ ಅವರು, 'ಜಮ್ಮು- ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಒಡೆಯಲು ಬಿಜೆಪಿ- ಆರ್‌ಎಸ್‌ಎಸ್‌ ಯತ್ನಿಸುತ್ತಿವೆ' ಎಂದು ಆರೋಪಿಸಿದ್ದರು.

ರಾಹುಲ್‌ ಗಾಂಧಿಯ ಈ ಹೇಳಿಕೆಗಳು ಬೇಜವಾಬ್ದಾರಿಯಿಂದ ಕೂಡಿವೆ ಎಂದು ಸಂಬಿತ್‌ ಪಾತ್ರ ತಿರುಗೇಟು ನೀಡಿದ್ದಾರೆ.

'ಕಾಶ್ಮೀರಿ ಪಂಡಿತರ ಸಂಕಷ್ಟಗಳಿಗೆ ಕಾಂಗ್ರೆಸ್ ಮತ್ತು ಅದರ ಸಮಾನ ಮನಸ್ಕ ಪಕ್ಷಗಳ ತುಷ್ಟೀಕರಣದ ರಾಜಕೀಯವೇ ಕಾರಣ' ಎಂದು ಪಾತ್ರ ಆರೋಪಿಸಿದ್ದಾರೆ.

'ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳು ಗಾಂಧಿ ಕುಟುಂಬದ ಪಾರಂಪರಿಕ ಬಳುವಳಿಗಳಾಗಿವೆ. ಕಾಶ್ಮೀರದ ಸಮಸ್ಯೆಗಳಿಗೆ ಜವಾಹರಲಾಲ್ ನೆಹರು ಅವರೇ ನೇರ ಹೊಣೆ' ಎಂದೂ ಪಾತ್ರ ವಾಗ್ದಾಳಿ ನಡೆಸಿದ್ದಾರೆ.

'ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಕಾಶ್ಮೀರವು ಈಗ ಅಭಿವೃದ್ಧಿಯತ್ತ ಸಾಗುತ್ತಿದೆ' ಎಂದು ಪಾತ್ರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.