ಕೋಲ್ಕತ್ತ: 2026ರಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ ಇತ್ತೀಚಿಗಿನ ಚುನಾವಣಾ ಫಲಿತಾಂಶದ ದತ್ತಾಂಶವನ್ನು ಆಧರಿಸಿ ಆಧಾರಿತ ಕಾರ್ಯತಂತ್ರ ರೂಪಿಸಿದೆ. ಇದಕ್ಕಾಗಿ ಹಿಂದಿನ ಚುನಾವಣೆಗಳಲ್ಲಿನ ಮತ ಗಳಿಕೆಯ ವಿಶ್ಲೇಷಣೆ ಆರಂಭಿಸಿದೆ.
‘2019 ಹಾಗೂ 2024ರ ಲೋಕಸಭಾ ಚುನಾವಣೆ ಹಾಗೂ 2021ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗಳಿಸಿದ ಮತಗಳು ಗೆಲುವು– ಸೋಲಿನ ಅಂತರ ಪಕ್ಷವು ಗೆಲ್ಲಬಹುದಾದ ಕ್ಷೇತ್ರ ಹಾಗೂ ನಿಕಟ ಸ್ಪರ್ಧೆ ಹೊಂದಿದ ಕ್ಷೇತ್ರಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಬಿಜೆಪಿ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಂತರಿಕ ಸಮೀಕ್ಷೆಗಳ ಪ್ರಕಾರ 50 ಕ್ಷೇತ್ರಗಳಲ್ಲಿ ಬಿಜೆಪಿಗೆ ತೀವ್ರ ಕಷ್ಟಕರವಾದ ವಾತಾವರಣ ಇದೆ. ಈಗಿರುವ ಪಕ್ಷದ ಸಂಘಟನೆ ಹಾಗೂ ಬೂತ್ ಏಜೆಂಟ್‌ಗಳ ನೇಮಕದ ಹೊರತಾಗಿಯೂ ಈ ಕ್ಷೇತ್ರಗಳಲ್ಲಿ ಗೆಲುವು ಪಡೆಯಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಹಿಂದಿನ ಎರಡು ಲೋಕಸಭೆ ಹಾಗೂ 2021ರ ವಿಧಾನಸಭಾ ಚುನಾವಣೆಯಲ್ಲಿ 60 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪಷ್ಟವಾಗಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದ 40 ಕ್ಷೇತ್ರಗಳಲ್ಲಿ ಎರಡು ಅಥವಾ ಮೂರನೇ ಸ್ಥಾನದಲ್ಲಿತ್ತು.
‘ಇದೇ ಅವಧಿಯಲ್ಲಿ 60 ಕ್ಷೇತ್ರಗಳಲ್ಲಿ ಒಂದು ಅಥವಾ ಎರಡು ಅವಧಿಗೆ ಪಕ್ಷವು ಮುನ್ನಡೆ ಪಡೆದಿತ್ತು. ಈ ಕ್ಷೇತ್ರಗಳಲ್ಲಿ ಮತ್ತೆ ಗೆಲುವು ಪಡೆದರೆ 160 ಕ್ಷೇತ್ರಗಳಲ್ಲಿ ಸುಲಭವಾಗಿ ಗೆಲುವು ಪಡೆಯಬಹುದು’ ಎಂದು ನಾಯಕರೊಬ್ಬರು ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭೆ ಸದಸ್ಯ ಬಲ 294 ಇದೆ. ಸರ್ಕಾರ ರಚನೆಗೆ ಕನಿಷ್ಠ 148 ಶಾಸಕರ ಅಗತ್ಯವಿದೆ. 2021ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 77 ಕ್ಷೇತ್ರಗಳಲ್ಲಿ ಗೆಲುವು ಪಡೆದರೆ ಶೇಕಡ 38ರಷ್ಟು ಮತಗಳನ್ನು ಪಡೆದಿತ್ತು.
ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು
ಮೆಗಾ ರ‍್ಯಾಲಿಗಳ ಬದಲಾಗಿ ಸಣ್ಣ ಗುಂಪುಗಳನ್ನು ಸೇರಿಸಿ ಸಭೆ
ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ಪಡೆದು ಚುನಾವಣೆ
ಕಾಂಗ್ರೆಸ್ ಎಡಪಕ್ಷಗಳ ಮತಗಳ ಸೆಳೆಯಲು ಯೋಜನೆ
ಸುವೇಂದು ಅಧಿಕಾರಿ ನೇತೃತ್ವದಲ್ಲಿ ಹೋರಾಟಕ್ಕೆ ಯೋಜನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.