ADVERTISEMENT

ರಾಜಕೀಯ ಲಾಭಕ್ಕಾಗಿ ಹೆಂಡತಿಯನ್ನೇ ತೊರೆದ ಮೋದಿ: ಮಾಯಾ ಟೀಕೆ

ಅಲ್ವಾರ್‌ ಅತ್ಯಾಚಾರ ಪ್ರಕರಣ: ತಾರಕ್ಕೇರಿದ ಮೋದಿ–ಮಾಯಾ ಕೆಸರೆರೆಚಾಟ

ಏಜೆನ್ಸೀಸ್
Published 13 ಮೇ 2019, 11:44 IST
Last Updated 13 ಮೇ 2019, 11:44 IST
   

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ತೆರೆ ಬೀಳುವ ಕಾಲ ಸನ್ನೀಹದಲ್ಲಿರುವಾಗ ರಾಜಕೀಯ ಕೆಸರೆರೆಚಾಟ ಮತ್ತಷ್ಟು ಹೆಚ್ಚಾಗಿದೆ.

ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತ ವಾಕ್ಸಮರ ತಾರಕ್ಕೇರಿದೆ. ಈಗ ಮತ್ತೆ ಆ ಬಗ್ಗೆ ಮಾತನಾಡಿರುವ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥ ಮಾಯಾವತಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

‘ಬಿಜೆಪಿಯಲ್ಲಿನ ಶಾಸಕಿಯರು ತಮ್ಮ ಗಂಡಂದಿರು ಮೋದಿ ಅವರ ಬಳಿ ಸುಳಿದಾಡುತ್ತಿರುವುದನ್ನು ನೋಡಿ,ಎಲ್ಲಿ ಇವರೂ ಪ್ರಧಾನಿಯ ತರಹ ಹೆಂಡತಿಯರನ್ನು ಬಿಟ್ಟು ಹೋಗುತ್ತಾರೆ ಎನ್ನುವ ಭಯದಲ್ಲಿದ್ದಾರೆ’ ಎಂದು ಮಾತಿನ ಚಾಟಿ ಬೀಸಿದ್ದಾರೆ.

ADVERTISEMENT

ಅಲ್ವಾರ್‌ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಾಗ ಮೋದಿ ಸೊಲ್ಲೆತ್ತಿಲ್ಲ. ಈಗ ಅದರೊಂದಿಗೆ ಕೆಟ್ಟ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಲಾಭವಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರವಾಗಿದೆ. ಇದು ನಾಚಿಕೆಗೇಡಿನ ವಿಷಯ. ರಾಜಕೀಯ ಲಾಭಕ್ಕಾಗಿ ಪತ್ನಿಯನ್ನೇ ಬಿಟ್ಟುಬಂದಿರುವ ಮೋದಿ ಅವರು ಇತರೆ ಮಹಿಳೆಯರನ್ನು ಗೌರವಿಸಲು ಹೇಗೆ ಸಾಧ್ಯ?’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ದಲಿತರ ಮತಗಳನ್ನು ಪಡೆಯುವುದಕ್ಕಾಗಿ ಮೋದಿ ಅವರ ರ್‍ಯಾಲಿಗಳಲ್ಲಿ ದಲಿತರ ಬಗ್ಗೆ ಕಪಟ ಪ್ರೀತಿ ತೋರಿಸುತ್ತಿದ್ದಾರೆ. ಶಬ್ಬೀರಪುರ ಗ್ರಾಮದ ದಲಿತರ ಮೇಲೆ ನಡೆದ ದಾಳಿ, ರೋಹಿತ್‌ ವೇಮುಲ ಸಾವು ಮತ್ತು ಗುಜರಾತ್‌ನ ಊನಾ ಜಿಲ್ಲೆಯಲ್ಲಿ ಸ್ವಯಂಘೋಷಿತ ಗೋರಕ್ಷಕರು ದಲಿತ ಕುಟುಂಬದ ಮೇಲೆ ನಡೆಸಿದ ಹಲ್ಲೆ... ಇವ್ಯಾವುದನ್ನೂ ದಲಿತರು ಮರೆತಿಲ್ಲ’ ಎಂದರು.

ಮಾಯಾವತಿ ಟೀಕೆಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಬಿಜೆಪಿ ಅಭ್ಯರ್ಥಿ ಸಂಬಿತ್‌ ಪಾತ್ರ, ‘ವಾಹಿನಿಯಲ್ಲಿ ಮಾಯಾವತಿ ಅವರ ಭಾಷಣವನ್ನು ಕೇಳುತ್ತಿದ್ದೆ, ಮೋದಿ ಕುರಿತು ಅವರು ಬಳಸಿದ ಪದಗಳು ತೀವ್ರ ನೋವುಂಟು ಮಾಡಿದವು. ಇದು ಯಾವ ರೀತಿ ಮನೋಭಾವ? ಮೋದಿ ಬಗ್ಗೆ ಅಷ್ಟೊಂದು ಧ್ವೇಷವೇ? ಏಕೆ? ಅವರು ಈಡೀ ದೇಶವನ್ನು ತಮ್ಮ ಕುಟುಂಬ ಎಂದು ಭಾವಿಸಿರುವುದಕ್ಕೇ? ಮಾಯಾವತಿ ಅವರೆ ನಿಮಗೆ ನಿಮ್ಮ ಸಹೋದರನೇ ಮುಖ್ಯ. ಆದರೆ, ಮೋದಿ ಅವರಿಗೆ ಈ ದೇಶವೇ ದೊಡ್ಡದು’ ಎಂದು ಹೇಳಿದ್ದಾರೆ.

ವಾಕ್‌ ಸಮರ

ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ತಮ್ಮ ರ್‍ಯಾಲಿಯಲ್ಲಿ ಉಲ್ಲೇಖಿಸಿದ್ದ ಮೋದಿ, ‘ಚುನಾವಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಭೀತಿಯಿಂದ ರಾಜಸ್ಥಾನ ಸರ್ಕಾರವು ತರಾತುರಿಯಲ್ಲಿ ಆ ಪ್ರಕರಣವನ್ನು ಮುಚ್ಚಿಹಾಕುತ್ತಿದೆ. ಆ ಸರ್ಕಾರ ಎಷ್ಟು ಸಂವೇದನಾ ಶೂನ್ಯವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಅತ್ಯಾಚಾರ ಸಂತ್ರಸ್ತೆಯ ನೋವಿಗಿಂದಲೂ ಮತ ರಾಜಕಾರಣ ದೊಡ್ಡದಾಗಬಾರದು’ ಎಂದಿದ್ದರು.

ನಂತರ ಈ ಬಗ್ಗೆ ರ್‍ಯಾಲಿವೊಂದರಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮಾತನಾಡಿದ್ದರು. ಅವರ ಮಾತುಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಮೋದಿ, ‘ತ್ರಸ್ತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಿ’ ಎಂದಿದ್ದರು. ‘ನೀವು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ನೀಡಿದ್ದ ಬೆಂಬಲವನ್ನು ಯಾಕೆ ಹಿಂಪಡೆಯಲಿಲ್ಲ?ಕಾಂಗ್ರೆಸ್ ಸರ್ಕಾರವೂ ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ’ ಎಂದಿದ್ದರು.

ಏನದು ಪ್ರಕರಣ

ಏಪ್ರಿಲ್‌ 26ರಂದು ರಾಜಸ್ಥಾನದ ಅಲ್ವಾರ್‌ನಲ್ಲಿ ದಂಪತಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹುಡುಗರ ಗುಂಪೊಂದು ಅವರನ್ನು ತಡೆದು, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪತಿಯ ಎದುರೇ ಪತ್ನಿಯ ಅತ್ಯಾಚಾರ ನಡೆಸಿದ್ದರು. ಈ ಬಗ್ಗೆ ದೂರು ನೀಡಿದಂತೆ ಬೆದರಿಕೆ ಹಾಕಿದ್ದರು.

‘ಏಪ್ರಿಲ್‌ 30ರಂದು ಘಟನೆ ಬಗ್ಗೆ ರಾಜಸ್ಥಾನ ಪೊಲೀಸರಿಗೆ ದೂರು ನೀಡಿದ್ದೆ. ಆದರೆ, ಅವರು ಎಫ್‌ಐಆರ್‌ ದಾಖಲಿಸಿದ್ದು ಮೇ 7ರಂದು. ಅದಾಗ್ಯೂ ಅವರು ಯಾವುದೇ ಕ್ರಮಕೈಗೊಳ್ಳಲಿಲ್ಲ. ಕೇಳಿದರೆ, ಚುನಾವಣಾ ಕೆಲಸದಲ್ಲಿ ತೊಡಗಿದ್ದೇವೆ ಎಂದು ಉತ್ತರಿಸಿದ್ದರು’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.