ಕೋಲ್ಕತ್ತ: ಇಲ್ಲಿನ ಕಾನೂನು ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗವು ಮೌನ ವಹಿಸಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಬೆಂಬಲಿಗರು ಬುಧವಾರ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಆಯೋಗದ ಕಚೇರಿ ಮುಂದೆ ಜಮಾಯಿಸಿದ್ದ ಪ್ರತಿಭಟನಕಾರರು, ‘ಘಟನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಯೋಗ ಹಾಗೂ ಅದರ ಅಧ್ಯಕ್ಷರಾದ ಲೀನಾ ಗಂಗೋಪಾಧ್ಯಾಯ ಅವರು ಕಾಣೆಯಾಗಿದ್ದಾರೆ’ ಎಂದು ಆರೋಪಿಸಿದರು. ಲಾಟೀನ್‌ಗಳನ್ನು ಹಿಡಿದು ಆವರಣದ ಸುತ್ತ, ಅಧ್ಯಕ್ಷರಿಗಾಗಿ ಅಣಕು ಹುಡುಕಾಟ ನಡೆಸಿದರು.
ತಮ್ಮ ವಿರುದ್ಧದ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಲೀನಾ ಅವರು ‘ನನ್ನ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ. ಘಟನೆ ಕುರಿತು ನಾನು ತಡವಾಗಿ ಪ್ರತಿಕ್ರಿಯೆ ನೀಡಿದೆ ಎಂದು ಏಕೆ ಆರೋಪಿಸುತ್ತಿದ್ದಾರೋ ನನಗೆ ತಿಳಿದಿಲ್ಲ. ಘಟನೆ ಕುರಿತು ತಕ್ಷಣವೇ ಮಾಹಿತಿ ಸಂಗ್ರಹಿಸಿದ್ದೇವೆ’ ಎಂದರು.
‘ಸಂತ್ರಸ್ತೆ ಹಾಗೂ ಆಕೆಯ ಪೋಷಕರನ್ನು ಭೇಟಿಯಾಗುವ ಪ್ರಯತ್ನವನ್ನೂ ಮಾಡಿದ್ದೇವೆ. ಆದರೆ ಸಂತ್ರಸ್ತೆಗೆ ಚಿಕಿತ್ಸೆ ನೀಡುತ್ತಿರುವುದರಿಂದ ಅದು ಸಾಧ್ಯವಾಗಿಲ್ಲ. ಹಿರಿಯ ಅಧಿಕಾರಿಗಳು ಹಾಗೂ ಡಿಜಿಪಿ ಅವರೊಂದಿಗೆ ಪ್ರಾರಂಭದಿಂದಲೂ ಘಟನೆ ಕುರಿತು ಚರ್ಚಿಸಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.