ADVERTISEMENT

ರಾಹುಲ್ ಗಾಂಧಿ ರಾಜಕೀಯವಾಗಿ ಅನುತ್ಪಾದಕರು: ಬಿಜೆಪಿ ಲೇವಡಿ

ಪಿಟಿಐ
Published 20 ಜುಲೈ 2022, 9:02 IST
Last Updated 20 ಜುಲೈ 2022, 9:02 IST
ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ – ಪಿಟಿಐ ಚಿತ್ರ
ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ – ಪಿಟಿಐ ಚಿತ್ರ   

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಕೀಯವಾಗಿ ಅನುತ್ಪಾದಕರಾಗಿದ್ದಾರೆ ಎಂದು ಲೇವಡಿ ಮಾಡಿರುವ ಬಿಜೆಪಿ, ಅವರು ಇತರ ಸಂಸದರ ಉತ್ಪಾದಕತೆಯನ್ನು ಕಡಿಮೆಯಾಗುವಂತೆ ಮಾಡಬಾರದು ಎಂದು ಹೇಳಿದೆ.

ಬೆಲೆ ಏರಿಕೆ ವಿರೋಧಿಸಿ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ಮಧ್ಯೆ ಬಿಜೆಪಿ ಈ ಹೇಳಿಕೆ ನೀಡಿದೆ.

ನಿರ್ದಿಷ್ಟ ಆಹಾರೋತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿರುವುದು ಮತ್ತು ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಸಂಸತ್‌ನಲ್ಲಿ ಪ್ರತಿಭಟನೆ ನಡೆಸುತ್ತಿವೆ. ಅಧಿವೇಶನ ಸೋಮವಾರ ಆರಂಭಗೊಂಡಿದ್ದರೂ ಪ್ರತಿಪಕ್ಷಗಳ ಪ್ರತಿಭಟನೆಯ ಪರಿಣಾಮ ಈವರೆಗೆ ಕಲಾಪ ಸುಗಮವಾಗಿ ನಡೆದಿಲ್ಲ.

ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಪ್ರತಿಪಕ್ಷಗಳು ನುಣುಚಿಕೊಳ್ಳುತ್ತಿವೆ ಎಂದು ಆಡಳಿತಪಕ್ಷ ಆರೋಪಿಸಿದರೆ ವಿಪಕ್ಷಗಳು ಸರ್ಕಾರದ ಮೇಲೆ ಇದೇ ಆರೋಪ ಹೊರಿಸುತ್ತಿವೆ.

ರಾಹುಲ್ ವಿರುದ್ಧ ಇರಾನಿ ಕಿಡಿ: ರಾಹುಲ್ ಗಾಂಧಿ ಅವರ ರಾಜಕೀಯ ಜೀವನವು ಸಂಸದೀಯ ಕಾರ್ಯವಿಧಾನಗಳು ಮತ್ತು ಸಂಪ್ರದಾಯಗಳಿಗೆ ಅಗೌರವ ತೋರುವ ಕಪ್ಪು ಚುಕ್ಕೆಯನ್ನು ಹೊಂದಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ.

ರಾಹುಲ್ ಗಾಂಧಿ 2004ರಿಂದ 2019ರ ಅವಧಿಯಲ್ಲಿ ಅಮೇಥಿ ಕ್ಷೇತ್ರದ ಬಗ್ಗೆ ಒಂದೇ ಒಂದು ಪ್ರಶ್ನೆಯನ್ನೂ ಸಂಸತ್‌ನಲ್ಲಿ ಕೇಳಿಲ್ಲ. ತಾವು ಪ್ರತಿನಿಧಿಸುತ್ತಿದ್ದ ಲೋಕಸಭಾ ಕ್ಷೇತ್ರವನ್ನು ಅನಾಥಗೊಳಿಸಿದ ಬಳಿಕ ವಯನಾಡ್‌ನಿಂದ ಸ್ಪರ್ಧಿಸಿ ಸಂಸದರಾದರು.2019ರ ಚಳಿಗಾಲದ ಅಧಿವೇಶನದಲ್ಲಿ ಸದನದಲ್ಲಿ ಅವರ ಹಾಜರಾತಿ ಪ್ರಮಾಣ ಶೇ 40ಕ್ಕಿಂತಲೂ ಕಡಿಮೆ ಇತ್ತು ಎಂದು ಇರಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.