ADVERTISEMENT

ಅಸ್ಸಾಂ–ಮಿಜೋರಾಂ ಗಡಿಯಲ್ಲಿ ಸ್ಫೋಟ: ಒಬ್ಬ ಪೊಲೀಸ್ ಬಂಧನ

ಪಿಟಿಐ
Published 30 ಅಕ್ಟೋಬರ್ 2021, 16:52 IST
Last Updated 30 ಅಕ್ಟೋಬರ್ 2021, 16:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ಹೈಲಕಂಡಿ ಜಿಲ್ಲೆಯ ಅಂತರರಾಜ್ಯ ಗಡಿಯ ಪೊಲೀಸ್ ಔಟ್‌ಪೋಸ್ಟ್ ಬಳಿ ಸ್ಫೋಟ ಸಂಭವಿಸಿದ್ದು, ಅಸ್ಸಾಂ ಮತ್ತು ಮಿಜೋರಾಂ ನಡುವೆ ಮತ್ತೆ ಉದ್ವಿಗ್ನತೆ ಭುಗಿಲೆದ್ದಿದೆ. ಘಟನೆಯಲ್ಲಿ ಕೈವಾಡವಿದೆ ಎಂಬ ಆರೋಪದಡಿ ಮಿಜೋರಾಂ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರ ಮುಂಜಾನೆ 1:30 ರ ಸುಮಾರಿಗೆ ಅಸ್ಸಾಂ ಪೊಲೀಸ್‌ನ ಬೈಚೆರಾ ಫಾರ್ವರ್ಡ್ ಔಟ್‌ಪೋಸ್ಟ್ ಬಳಿ ‘ಕಡಿಮೆ ತೀವ್ರತೆಯ ಸ್ಫೋಟ’ಸಂಭವಿಸಿದೆ ಎಂದು ಹೈಲಕಂಡಿ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಉಪಾಧ್ಯಾಯ ಪಿಟಿಐಗೆ ತಿಳಿಸಿದ್ದಾರೆ.

ಅಸ್ಸಾಂ–ಮಿಜೋರಾಂ ನಡುವಿನ ಕ್ಯಾಚಾರ್ ಜಿಲ್ಲೆಯ ವಿವಾದಿತ ಗಡಿ ಪ್ರದೇಶದಲ್ಲಿ ಪೊಲೀಸ್ ಪಡೆಗಳ ನಡುವಿನ ಘರ್ಷಣೆಯಲ್ಲಿ ಆರು ಅಸ್ಸಾಂ ಪೊಲೀಸರು ಸೇರಿದಂತೆ ಏಳು ಜನರು ಸಾವನ್ನಪ್ಪಿದ ಸುಮಾರು ಮೂರು ತಿಂಗಳ ನಂತರ ಈ ಘಟನೆ ಸಂಭವಿಸಿದೆ. ‘ನಮ್ಮ ಹೊರಠಾಣೆ ಗುಡ್ಡದ ಮೇಲಿತ್ತು ಮತ್ತು ಅದರ ಕೆಳಗೆ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ನಾವು ತಕ್ಷಣ ಕೇಂದ್ರ ಪಡೆಗಳ ಸಹಾಯದಿಂದ ಪ್ರದೇಶವನ್ನು ಸುತ್ತುವರೆದಿದ್ದೇವೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದೇವೆ’ಎಂದು ಹೈಲಕಂಡಿ ಎಸ್‌ಪಿ ಹೇಳಿದರು.

ADVERTISEMENT

ಶುಕ್ರವಾರ ಬೆಳಿಗ್ಗೆ, ಮಿಜೋರಾಂ ಪೋಲೀಸ್‌ನ ಭಾರತೀಯ ರಿಸರ್ವ್ ಬೆಟಾಲಿಯನ್ (ಐಆರ್‌ಬಿಎನ್) ಸಿಬ್ಬಂದಿಯು ಈ ಪ್ರದೇಶದಲ್ಲಿ ಅಡ್ಡಾಡುತ್ತಿರುವುದು ಕಂಡುಬಂದಿದೆ. ಅವರು ಅಲ್ಲಿ ಏಕೆ ಬಂದರು ಎಂಬುದಕ್ಕೆ ಸೂಕ್ತ ಕಾರಣ ಕೊಟ್ಟಿಲ್ಲ ಎಂದು ಉಪಾಧ್ಯಾಯ ಹೇಳಿದರು.

‘ನಾವು ಆ ಪೊಲೀಸನನ್ನು ಬಂಧಿಸಿ ಕರೆದುಕೊಂಡು ಹೋದೆವು. ವಿಚಾರಣೆಯ ಸಮಯದಲ್ಲಿ, ಸ್ಫೋಟದಲ್ಲಿ ಅವರ ಕೈವಾಡವಿರುವುದು ಕಂಡುಕೊಂಡಿದ್ದೇವೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ಎಂದು ಅವರು ಹೇಳಿದರು.

ಅಸ್ಸಾಂನ ಕಚುರ್ತಾಲ್ ಪ್ರದೇಶದಲ್ಲಿ ಸೇತುವೆಯ ನಿರ್ಮಾಣಕ್ಕೆ ಅಸ್ಸಾಂ ಪೊಲೀಸರು ವಿರೋಧ ವ್ಯಕ್ತಪಡಿಸಿದ ಎರಡು ದಿನಗಳ ನಂತರ ಸ್ಫೋಟ ಸಂಭವಿಸಿದೆ.

‘ನಮ್ಮ ಆಕ್ಷೇಪದ ನಂತರ ಕೇಂದ್ರದ ಮಧ್ಯಸ್ಥಿಕೆಯಲ್ಲಿ ಮಿಜೋರಾಂ ಸೇತುವೆಯ ನಿರ್ಮಾಣವನ್ನು ನಿಲ್ಲಿಸಿತು. ಆದರೆ ಅಕ್ಟೋಬರ್ 26 ರಂದು ಅವರು ಮತ್ತೆ ಆ ಕೆಲಸವನ್ನು ಪ್ರಾರಂಭಿಸಿದರು. ನಾವು ಆಕ್ಷೇಪಿಸಿದಾಗ ಅವರು ತಮ್ಮ ಉಪಕರಣಗಳನ್ನು ತೆಗೆದುಕೊಳ್ಳದೆ ಸ್ಥಳದಿಂದ ತೆರಳಿದ್ದರು’ಎಂದು ಉಪಾಧ್ಯಾಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.