ADVERTISEMENT

ಬೌದ್ಧ ಧರ್ಮಕ್ಕೆ ಡಾ. ಅಂಬೇಡ್ಕರ್‌ಗೆ ಆಹ್ವಾನ ನೀಡಿ 69 ವರ್ಷ: ಕಾಂಗ್ರೆಸ್ ನೆನಪು

ಪಿಟಿಐ
Published 14 ಅಕ್ಟೋಬರ್ 2025, 6:08 IST
Last Updated 14 ಅಕ್ಟೋಬರ್ 2025, 6:08 IST
<div class="paragraphs"><p>ಮಹಾರಾಷ್ಟ್ರದ ನಾಗ್ಪುರದಲ್ಲಿ 1956ರ ಅ. 14ರಂದು ಬೌದ್ಧ ಧರ್ಮ ಸ್ವೀಕರಿಸಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸವಿತಾ ಅಂಬೇಡ್ಕರ್</p></div>

ಮಹಾರಾಷ್ಟ್ರದ ನಾಗ್ಪುರದಲ್ಲಿ 1956ರ ಅ. 14ರಂದು ಬೌದ್ಧ ಧರ್ಮ ಸ್ವೀಕರಿಸಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸವಿತಾ ಅಂಬೇಡ್ಕರ್

   

ಎಕ್ಸ್ ಚಿತ್ರ

ನವದೆಹಲಿ: ‘ಮಹಾರಾಷ್ಟ್ರದ ನಾಗ್ಪುರದಲ್ಲಿ 69 ವರ್ಷಗಳ (1956ರ ಅ. 14) ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅವರ ಪತ್ನಿ ಸವಿತಾ ಅಂಬೇಡ್ಕರ್ ಅವರಿಗೆ ಬೌದ್ಧ ಧರ್ಮಕ್ಕೆ ಅಧಿಕೃತವಾಗಿ ಆಹ್ವಾನ ನೀಡಲಾಗಿತ್ತು. ಇದಾದ ನಂತರ ಸಂವಿಧಾನ ಶಿಲ್ಪಿಯು ದೇಶದ 5 ಲಕ್ಷ ಜನರಿಗೆ ತಾವೇ ಸಿದ್ಧಪಡಿಸಿದ 22 ಕ್ರಾಂತಿಕಾರಕ ಪ್ರಮಾಣಗಳನ್ನು ಬೋಧಿಸಿದರು’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ನೆನಪಿಸಿಕೊಂಡಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘1956ರಲ್ಲಿ ಗೌತಮ ಬುದ್ಧ ಅವರ 2500ನೇ ಜಯಂತಿಯನ್ನು ಭಾರತ ಆಚರಿಸುತ್ತಿತ್ತು. ಅದೇ ಸಂದರ್ಭದಲ್ಲಿ ಬರ್ಮಾ ಸನ್ಯಾಸಿ ಭಿಕ್ಕು ಚಂದಿರಮಣಿ ಅವರು ನಾಗ್ಪುರದಲ್ಲಿ ಡಾ. ಅಂಬೇಡ್ಕರ್ ದಂಪತಿಗೆ ಬೌದ್ಧ ಧರ್ಮಕ್ಕೆ ಆಹ್ವಾನ ನೀಡಿದರು. ಅದನ್ನು ಒಪ್ಪಿಕೊಂಡು ಬೌದ್ಧ ಧರ್ಮವನ್ನು ಸ್ವೀಕರಿಸಿದ ಡಾ. ಅಂಬೇಡ್ಕರ್‌ ಅವರು ದೀಕ್ಷಭೂಮಿಯಲ್ಲಿ ಸೇರಿದ್ದ ಐದು ಲಕ್ಷ ಜನರಿಗೆ 22 ಕ್ರಾಂತಿಕಾರಕ ಪ್ರಮಾಣಗಳನ್ನು ಬೋಧಿಸಿದರು’ ಎಂದಿದ್ದಾರೆ.

‘ಅಶೋಕ್ ಗೋಪಾಲ್ ಅವರ ಆತ್ಮಕಥೆ ‘ಎ ಪಾರ್ಟ್‌ ಅಪಾರ್ಟ್‌: ದಿ ಲೈಫ್‌ ಅಂಡ್‌ ಥಾಟ್ ಆಫ್ ಬಿ.ಆರ್. ಅಂಬೇಡ್ಕರ್‌’ ಕೃತಿಯಲ್ಲಿ ಐತಿಹಾಸಿಕ ಘಟನೆಗಳ ಹಲವು ಹೊಸ ಸಂಗತಿಗಳು ದಾಖಲಾಗಿದ್ದು, ಅದರಲ್ಲಿ 1956ರ ಅ. 14ರ ಘಟನೆಯನ್ನೂ ದಾಖಲಿಸಲಾಗಿದೆ’ ಎಂದಿದ್ದಾರೆ.

‘ಅಂಬೇಡ್ಕರ್ ಅವರಿಗೆ 50 ವರ್ಷಗಳ ಹಿಂದಿನಿಂದಲೂ ಬುದ್ಧನ ಬದುಕಿನ ಕುರಿತಾಗಿ ಅಪಾರವಾಗಿ ಆಕರ್ಷಿತರಾಗಿದ್ದರು. 1950ರಲ್ಲಿ ಬೌದ್ಧ ಧರ್ಮದ ಕುರಿತು ಬಹಿರಂಗ ಸಭೆಗಳಲ್ಲಿ ಮಾತನಾಡಿದ್ದರು. 1956ರ ಫೆಬ್ರುವರಿಯಲ್ಲಿ ಅಂಬೇಡ್ಕರ್‌ ಚಳವಳಿಗೆ ಸಂಬಂಧಿಸಿದ ನಿಯತಕಾಲಿಕೆಯ ಹೆಸರನ್ನು ಜನತಾದಿಂದ ‘ಪ್ರಬುದ್ಧ ಭಾರತ’ ಎಂದು ಬದಲಿಸಿದರು’ ಎಂದು ಜೈರಾಮ್ ನೆನಪಿಸಿಕೊಂಡಿದ್ದಾರೆ.

‘ಅಂಬೇಡ್ಕರ್ ದಂಪತಿಯ ಬೌದ್ಧ ಧರ್ಮ ಸ್ವೀಕಾರಕ್ಕೆ ನಾಗ್ಪುರವನ್ನೇ ಆಯ್ಕೆ ಮಾಡುವಲ್ಲಿ ಭಾರತೀಯ ಬುದ್ಧ ಜನ ಸಮಿತಿಯ ವಾಮನರಾವ್ ಗೋಡಬೋಲೆ ಅವರ ಪಾತ್ರ ಮಹತ್ವದ್ದಾಗಿತ್ತು. 1956ರ ಅ. 14ರಂದು ಭಾನುವಾರ ಬೌದ್ಧ ಧರ್ಮ ಸ್ವೀಕಾರಕ್ಕೆ ದಿನಾಂಕ ನಿಗದಿಯಾಯಿತು. ವಿಜಯದಶಮಿಯಾದ ಅದೇ ದಿನವನ್ನು ಆಯ್ಕೆ ಮಾಡಲಾಗಿತ್ತು. ಆ ದಿನ ಸಾಮ್ರಾಟ ಅಶೋಕ ವಿಜಯವನ್ನು ಘೋಷಿಸಿದ ದಿನವಾಗಿತ್ತು’ ಎಂದು ರಮೇಶ್ ಹೇಳಿದ್ದಾರೆ.

‘ಧರ್ಮ ಸ್ವೀಕರಿಸಿ ಒಂದು ತಿಂಗಳ ಬಳಿಕ ಡಾ. ಅಂಬೇಡ್ಕರ್ ಅವರು ಕಠ್ಮಂಡುವಿನಲ್ಲಿ ‘ಬುದ್ಧ ಅಥವಾ ಕಾರ್ಲ್‌ ಮಾರ್ಕ್ಸ್‌’ ಎಂಬ ವಿಷಯ ಕುರಿತು ಬೌದ್ಧರ ವಿಶ್ವ ಒಕ್ಕೂಟದಲ್ಲಿ ಭಾಷಣ ಮಾಡಿದರು. ಲುಂಬಿನಿ, ಬೋಧ ಗಯಾ ಮತ್ತು ಸಾರಾನಾಥ ಮಾರ್ಗವಾಗಿ ಅವರು ನವದೆಹಲಿಗೆ ಮರಳಿದರು. ಇದಾಗಿ 6 ದಿನಗಳ ಬಳಿಕ ಅವರು ನಿಧನರಾದರು (1956ರ ಡಿ. 6ರಂದು)’ ಎಂದಿದ್ದಾರೆ.

‘ದಶಕಗಳ ಅಧ್ಯಯನ ನಂತರ ‘ದಿ ಬುದ್ಧ ಅಂಡ್‌ ಹಿಸ್‌ ಧಮ್ಮ’ ಎಂಬ ಕೃತಿಯನ್ನು ರಚಿಸಿದರು. ಕೊನೆಯುಸಿರೆಳೆಯುವ ಕೆಲವೇ ಕ್ಷಣಗಳ ಮೊದಲು ಅವರು ಅದಕ್ಕೆ ಮುನ್ನುಡಿ ಬರೆದಿದ್ದರು. 1957ರ ಜನವರಿಯಲ್ಲಿ ಆ ಕೃತಿ ಬಿಡುಗಡೆಯಾಯಿತು’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.