ADVERTISEMENT

ಅಂಬೇಡ್ಕರ್ ಮಹಾಪರಿನಿರ್ವಾಣ ದಿನ: ಮುರ್ಮು, ಮೋದಿ, ಸಿದ್ದರಾಮಯ್ಯ ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2025, 5:40 IST
Last Updated 6 ಡಿಸೆಂಬರ್ 2025, 5:40 IST
   

ನವದೆಹಲಿ: ಸಂವಿಧಾನ ಶಿಲ್ಪಿ, ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ ಜಿಲ್ಲೆಯ ಮೊವ್ ಎಂಬಲ್ಲಿ 1891ರ ಏಪ್ರಿಲ್‌ 14ರಂದು ಜನಿಸಿದ ಅಂಬೇಡ್ಕರ್‌ ಅವರು, 1956ರ ಈ ದಿನ (ಡಿಸೆಂಬರ್‌ 6ರಂದು) ನಿಧನರಾದರು. ಅವರ ಸಮಾಧಿ ಸ್ಥಳ 'ಚೈತ್ಯಭೂಮಿ' ಮಹಾರಾಷ್ಟ್ರದ ದಾದರ್‌ನಲ್ಲಿದೆ.

ಅವರ ಪುಣ್ಯತಿಥಿ ಸ್ಮರಣಾರ್ಥ ಸಂಸತ್‌ ಭವನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುರ್ಮು, ಮೋದಿ ಅವರು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದ ಚಿತ್ರಗಳನ್ನು ಮುರ್ಮು ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

'ಬಾಬಾಸಾಹೇಬ್ ಅಂಬೇಡ್ಕರ್ ಅವರ ದಾರ್ಶನಿಕ ನಾಯಕತ್ವ ಮತ್ತು ನ್ಯಾಯ, ಸಮಾನತೆ ಹಾಗೂ ಸಾಂವಿಧಾನಿದ ಕುರಿತ ಅಚಲ ಬದ್ಧತೆಯು ದೇಶದ ಪಯಣವನ್ನು ಮುನ್ನಡೆಸುತ್ತಲೇ ಇದೆ. ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯಲು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಲು ಹಾಗೂ ಮುಂದಿನ ತಲೆಮಾರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ವಿಕಸಿತ ಭಾರತ ನಿರ್ಮಾಣದ ಕೆಲಸ ಮಾಡುವಾಗ ಅವರ ಆದರ್ಶಗಳು ನಮಗೆ ದಾರಿ ತೋರಲಿ' ಎಂದು ಪ್ರಧಾನಿ ಮೋದಿ ಅವರು ಬರೆದುಕೊಂಡಿದ್ದಾರೆ.

'ಅಂಬೇಡ್ಕರ್‌ ಅವರು ಪ್ರತಿಪಾದಿಸಿದ ಹಾಗೂ ಸರ್ವಕಾಲಕ್ಕೂ ಅನ್ವಯವಾಗುವ ಸಮಾನತೆ, ನ್ಯಾಯ ಮತ್ತು ವ್ಯಕ್ತಿ ಘನತೆಯು ಸಂವಿಧಾನವನ್ನು ರಕ್ಷಿಸುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ. ಹಾಗೆಯೇ, ಎಲ್ಲರನ್ನೂ ಒಳಗೊಳ್ಳುವ ಹಾಗೂ ಸಹಾನುಭೂತಿಯ ಭಾರತ ನಿರ್ಮಾಣಕ್ಕೆ ಸಂಘಟಿತ ಹೋರಾಟ ನಡೆಸಲು ಸ್ಫೂರ್ತಿ ನೀಡುತ್ತದೆ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಜಾತಿಯ ಕಾರಣಕ್ಕಾಗಿ ಹುಟ್ಟಿನಿಂದಲೇ ತಾವು ಎದುರಿಸಿದ ನೋವು, ಅವಮಾನ, ನಿಂದನೆಯನ್ನು ಸವಾಲಾಗಿ ಸ್ವೀಕರಿಸಿ, ಮುಂದೆ ತನ್ನಂತಹ ಕೋಟ್ಯಂತರ ಅವಕಾಶ ವಂಚಿತ ಜನರಿಗೆ ಸ್ವಾತಂತ್ರ್ಯ, ಸಮಾನತೆ, ಘನತೆಯ ಬದುಕನ್ನು ಕಲ್ಪಿಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕಿನ ಹಾದಿ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಮಹಾನ್ ಮಾನವತಾವಾದಿ, ದಾರ್ಶನಿಕ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಪರಿನಿರ್ವಾಣ ದಿನದಂದು ಆ ಮಹಾಚೇತನಕ್ಕೆ ಕೋಟಿ ನಮನಗಳು' ಎಂದು ಗೌರವ ಸಮರ್ಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.