ಹೈದರಾಬಾದ್: ಬಿಆರ್‌ಎಸ್ ಪಕ್ಷದ ಹಿರಿಯ ನಾಯಕ ಮಾಗಂಟಿ ಗೋಪಿನಾಥ್(63) ಅವರು ಹೃದಯಾಘಾತದಿಂದ ಭಾನುವಾರ ಮುಂಜಾನೆ 5.45ಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಜೂನ್.5ರಂದು ಹೃದಯಾಘಾತ ಸಂಭವಿಸಿದ ತಕ್ಷಣವೇ ಅವರನ್ನು ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
2023ರ ವಿಧಾನಸಭಾ ಚುನಾವಣೆಯಲ್ಲಿ ಜುಬ್ಲಿ ಹಿಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೋಪಿನಾಥ್ ಅವರು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರನ್ನು ಸೋಲಿಸಿದ್ದರು.
ಟಿಡಿಪಿ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿದ ಗೋಪಿನಾಥ್ ಅವರು ಪಕ್ಷದ ಹೈದರಾಬಾದ್ ಘಟಕದ ಅಧ್ಯಕ್ಷರಾಗಿದ್ದರು. 2014ರಲ್ಲಿ ಟಿಡಿಪಿ ಪಕ್ಷದಿಂದ ಜುಬ್ಲಿ ಹಿಲ್ ಕ್ಷೇತ್ರದಿಂದ ವಿಧಾನಸಭೆ ಪ್ರವೇಶ ಮಾಡಿದರು. 2016ರಲ್ಲಿ ಹಲವು ಟಿಡಿಪಿ ನಾಯಕರು ಬಿಆರ್‌ಎಸ್ ಸೇರಿದಾಗ, ಗೋಪಿನಾಥ್ ಕೂಡ ಅವರೊಂದಿಗಿದ್ದರು. 2018ರ ಉಪ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷದ ಮೂಲಕ ಗೆಲವು ಸಾಧಿಸಿದ್ದರು.
ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಕೇಂದ್ರ ಸಚಿವ ಜಿ. ಕೃಷ್ಣ ರೆಡ್ಡಿ ಸೇರಿದಂತೆ ಹಲವು ನಾಯಕರು ಗೋಪಿನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.