ಹೈದರಾಬಾದ್: ಕೇಂದ್ರ ಸರ್ಕಾರವು ವಕ್ಫ್ ಮಂಡಳಿ ಕಾಯ್ದೆಗೆ ಪ್ರಸ್ತಾಪಿಸಿರುವ ತಿದ್ದುಪಡಿಗಳನ್ನು ಪಕ್ಷ ಬಲವಾಗಿ ವಿರೋಧಿಸುತ್ತದೆ ಎಂದು ಬಿಆರ್‌ಎಸ್ ನಾಯಕಿ ಕೆ.ಕವಿತಾ ಹೇಳಿದ್ದಾರೆ.
ಕಾಮರೆಡ್ಡಿ ಜಿಲ್ಲೆಯ ಬನ್ಸ್ವಾಡದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಮಾತನಾಡಿದ ಅವರು, ‘ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ‘ಫ್ಲೈಟ್ ಮೋಡ್’ ಸಿಎಂ ಆಗಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ, ಕಳೆದ 15 ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಗೆ 40 ಬಾರಿ ಪ್ರವಾಸ ಮಾಡಿದ್ದಾರೆ. ಆದರೆ, ರಾಜ್ಯಕ್ಕೆ ಮಹತ್ವದ ಯೋಜನೆಗಳನ್ನು ತರುವಲ್ಲಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಕೇಂದ್ರ ಸರ್ಕಾರವು ವಕ್ಫ್ ಮಂಡಳಿ ಕಾಯ್ದೆಗೆ ಪ್ರಸ್ತಾಪಿಸಿರುವ ತಿದ್ದುಪಡಿಗಳನ್ನು ಬಿಆರ್‌ಎಸ್ ಬಲವಾಗಿ ವಿರೋಧಿಸುತ್ತದೆ. ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಕ್ಕುಗಳಿಗಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೋರಾಡಲು ಬಿಆರ್‌ಎಸ್ ಬದ್ಧವಾಗಿದೆ’ ಎಂದು ಕವಿತಾ ಹೇಳಿದ್ದಾರೆ.
‘ಕಾಂಗ್ರೆಸ್ ಸರ್ಕಾರ ತನ್ನ ಆಡಳಿತದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯನ್ನು ನಿಯಂತ್ರಿಸುವಲ್ಲಿ ಸೋತಿದೆ. ಮುಸ್ಲಿಂ ಯುವಕರು ಮತ್ತು ಮಹಿಳೆಯರಿಗೆ ಸ್ವ-ಉದ್ಯೋಗವನ್ನು ಉತ್ತೇಜಿಸಲು ಬಿಆರ್‌ಎಸ್ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರೂ, ಕಾಂಗ್ರೆಸ್ ಈ ಉಪಕ್ರಮಗಳನ್ನು ಮುಂದುವರಿಸುವಲ್ಲಿ ವಿಫಲವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.