ನವದೆಹಲಿ: ಪಶ್ಚಿಮ ಬಂಗಾಳದ ಸೇನಾ ಕ್ಯಾಂಪ್‌ನಲ್ಲಿ ಸೈನಿಕರೊಬ್ಬರಿಗೆ ಊರುಗೋಲು ಹಿಡಿದುಕೊಂಡು ನೆಲದ ಮೇಲೆ ಉರುಳಾಡುವಂತೆ ಶಿಕ್ಷೆ ವಿಧಿಸಿದ ಕಮಾಂಡಿಂಗ್ ಅಧಿಕಾರಿ ವರ್ತನೆಯ ಕುರಿತಂತೆ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ತನಿಖೆಗೆ ಆದೇಶ ನೀಡಿದೆ.
‘3ನೇ ಬೆಟಾಲಿಯನ್‌ನ ಸೈನಿಕರೊಬ್ಬರು ಶಿಸ್ತು ಉಲ್ಲಂಘಿಸಿದ ಕಾರಣಕ್ಕಾಗಿ 162ನೇ ಬೆಟಾಲಿಯನ್‌ನ ಕಮಾಂಡೆಂಟ್ ಅಧಿಕಾರಿ ಈ ರೀತಿ ಶಿಕ್ಷಿಸಿದ್ದಾರೆ. ಸೆ.1ರಂದು ಈ ಘಟನೆ ನಡೆದಿದ್ದು, ಕೂಚ್ ಬೆಹಾರ್‌ನ ಗಡಿ ಕಾವಲು ಪಡೆಯ ಕೇಂದ್ರ ಕಚೇರಿಯ ಸಿಬ್ಬಂದಿ ನ್ಯಾಯಾಲಯ ವಿಚಾರಣೆಗೆ (ಎಸ್‌ಸಿಒಐ) ಆದೇಶಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ರೂಪ್‌ನಗರದಲ್ಲಿರುವ ಬೆಟಾಲಿಯನ್ ಕ್ಯಾಂಪ್‌ನಲ್ಲಿ ಎರಡು ಬೆಟಾಲಿಯನ್‌ಗಳು ಜಂಟಿಯಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಕಾನ್‌ಸ್ಟೆಬಲ್ ರ‍್ಯಾಂಕ್‌ನ ಸೈನಿಕರೊಬ್ಬರಿಗೆ ಉರುಗೋಲು ಹಿಡಿದು ಉರುಳಾಡಲು ಸೂಚಿಸಲಾಗಿದೆ. ಈ ಬಗ್ಗೆ ವಿಚಾರಣಾ ನ್ಯಾಯಾಲಯಕ್ಕೂ ಸೂಚಿಸಿದ್ದು, ಘಟನೆಗೆ ಕಾರಣವಾದ ಎಲ್ಲಾ ಅಂಶಗಳನ್ನು ಪರಿಗಣಿಸಲಾಗುವುದು’ ಎಂದು ಬಿಎಸ್‌ಎಫ್‌ನ ವಕ್ತಾರರು ತಿಳಿಸಿದ್ದಾರೆ.
‘ಘಟನೆಗಳನ್ನು ಕುರಿತು ವಿಸ್ತೃತ ವಿಚಾರಣೆ ನಡೆಸುವಂತೆ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಪುನಾರವರ್ತನೆಯಾಗದಂತೆ ತಡೆಯಲಾಗುವುದು’ ಎಂದು ಹೇಳಿದ್ದಾರೆ.
ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 2.70 ಲಕ್ಷ ಸಿಬ್ಬಂದಿಯಿದ್ದು, ಇಡೀ ದೇಶದ ಗಡಿ ಕಾವಲಿನ ಹೊಣೆ ಹೊತ್ತುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.