ADVERTISEMENT

ಸಮೀಕ್ಷೆ: ಛತ್ತೀಸಗಡ, ಮಧ್ಯ ಪ್ರದೇಶದಲ್ಲಿ ‘ಕೈ’ಗೆ ಮಾಯಾ ಏಟು

ರಾಜಸ್ಥಾನದಲ್ಲಿ ಕಾಂಗ್ರೆಸ್‌, ಛತ್ತೀಸಗಡದಲ್ಲಿ ಬಿಜೆಪಿ ಗೆಲುವು ಖಚಿತ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 11:27 IST
Last Updated 9 ನವೆಂಬರ್ 2018, 11:27 IST
   

ನವದೆಹಲಿ: ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳದಿರುವ ಬಿಎಸ್‌ಪಿ ನಾಯಕಿ ಮಾಯಾವತಿ ಅವರ ನಿರ್ಧಾರ ಛತ್ತೀಸಗಡ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಲಿದೆ ಎಂದು ಲೋಕನೀತಿ–ಸಿಎಸ್‌ಡಿಎಸ್‌ ಸಮೀಕ್ಷೆ ಹೇಳಿದೆ.

ಛತ್ತೀಸಗಡದಲ್ಲಿ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ಛತ್ತೀಸಗಡ (ಜೆಸಿಸಿ) ಜತೆಗೆ ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದೆ.

ಬಿಎಸ್‌ಪಿಗೆ ಹೆಚ್ಚಿನ ಸ್ಥಾನಗಳೇನೂ ದೊರೆಯದು. ಆದರೆ, ಈ ಪಕ್ಷ ಪಡೆಯುವ ಮತಗಳು ಕಾಂಗ್ರೆಸ್‌ ಗೆಲುವಿನ ಸಾಧ್ಯತೆಗಳನ್ನು ಗಣನೀಯವಾಗಿ ಕುಗ್ಗಿಸಲಿದೆ. ಇದು ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೂ ಅನ್ವಯ ಆಗಲಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ADVERTISEMENT

ಅಕ್ಟೋಬರ್‌ ಎರಡನೇ ವಾರದಲ್ಲಿ ಸಮೀಕ್ಷೆ ನಡೆಸಲಾಗಿದೆ. ಅದರ ಪ್ರಕಾರ, ರಾಜಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ಪಡೆಯಲಿದೆ. ಛತ್ತೀಸಗಡದಲ್ಲಿ ಬಿಜೆಪಿ ನಾಲ್ಕನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲಿದೆ. ಮಧ್ಯ ಪ್ರದೇಶದಲ್ಲಿ ಗೆಲುವಿನ ಸಾಧ್ಯತೆ ಬಿಜೆಪಿಗೆ ಹೆಚ್ಚು.

ಈ ಮೂರೂ ರಾಜ್ಯಗಳಲ್ಲಿ ಬಿಎಸ್‌ಪಿಗೆ ದೊಡ್ಡ ನೆಲೆ ಇಲ್ಲ. ಆದರೆ, ಇಲ್ಲಿ ಬಿಎಸ್‌ಪಿಯ ಸಾಧನೆ ರಾಷ್ಟ್ರ ಮಟ್ಟದಲ್ಲಿ ಪರಿಣಾಮ ಬೀರಬಹುದು. ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಂದಾಗುತ್ತಿರುವ ಈ ಹೊತ್ತಿನಲ್ಲಿ ಕಾಂಗ್ರೆಸ್ ಗೆಲುವಿಗೆ ಬಿಎಸ್‌ಪಿ ಅಡ್ಡಗಾಲಾದರೆ ಅದು ಮಹಾಮೈತ್ರಿ ಸಾಧ್ಯತೆಯ ಮೇಲೆ ಪರಿಣಾಮ ಉಂಟು ಮಾಡಬಹುದು.

ರಾಜಸ್ಥಾನದಲ್ಲಿ ಬಿಎಸ್‌ಪಿ ಪಡೆಯಬಹುದಾದ ಮತಗಳ ಪ್ರಮಾಣ ಶೇ 2 ಮತ್ತು ಮಧ್ಯ ಪ್ರದೇಶದಲ್ಲಿ ಶೇ 6 ಮಾತ್ರ. ಆದರೆ, ಮಧ್ಯ ಪ್ರದೇಶದಲ್ಲಿ ಬಿಎಸ್‌ಪಿ ಶೇ 2–3ರಷ್ಟು ಮತಗಳನ್ನೂ ಪಡೆದರೂ ಅದು ಆ ರಾಜ್ಯವನ್ನು ಯಾರು ಆಳಬೇಕು ಎಂಬುದನ್ನು ನಿರ್ಧರಿಸಲಿದೆ.

ಮಾಯಾವತಿ–ಅಜಿತ್‌ ಜೋಗಿ ಮೈತ್ರಿಯಿಂದ ಬಿಜೆಪಿ–ಕಾಂಗ್ರೆಸ್‌ನಲ್ಲಿ ಯಾರಿಗೆ ಹೆಚ್ಚು ನಷ್ಟ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್‌ ತೆರಬೇಕಾದ ಬೆಲೆಯೇ ದೊಡ್ಡದು. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರ ಪೈಕಿ ಆರರಲ್ಲಿ ಒಬ್ಬರು ಈ ಮೈತ್ರಿಕೂಟಕ್ಕೆ ಮತ ನೀಡಲು ನಿರ್ಧರಿಸಿದ್ದಾರೆ. ಮಧ್ಯ ಪ್ರದೇಶಕ್ಕೂ ಬಹುತೇಕ ಇಂತಹುದೇ ಲೆಕ್ಕಾಚಾರ ಅನ್ವಯ ಆಗಲಿದೆ. ಯಾಕೆಂದರೆ, ಈ ರಾಜ್ಯದಲ್ಲಿ ಕಾಂಗ್ರೆಸ್‌–ಬಿಎಸ್‌ಪಿ ಮೈತ್ರಿ ಆಗಬೇಕು ಎಂದು ಎರಡೂ ಪಕ್ಷಗಳ ಸಾಂಪ್ರದಾಯಿಕವಾದ ಹಲವು ಮತದಾರರು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯ ಪ್ರದೇಶದ ಚುನಾವಣೆ ಎರಡೂ ಪ್ರಮುಖ ಪಕ್ಷಗಳಿಗೆ ಕತ್ತಿಯ ಅಲಗಿನ ಮೇಲಿನ ನಡಿಗೆ ಎಂದು ಸಮೀಕ್ಷೆ ಬಣ್ಣಿಸಿದೆ. ಭ್ರಷ್ಟಾಚಾರ ಆರೋಪಗಳು ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಗೆ ಸಂಬಂಧಿಸಿದ ವಿವಾದಗಳು ಬಿಜೆಪಿಗೆ ಹೊಡೆತ ನೀಡಿವೆ. ಆದರೆ, ಅದರ ಪ್ರಯೋಜನ ಪಡೆಯಲು ಕಾಂಗ್ರೆಸ್‌ಗೆ ಸಾಧ್ಯವಾಗದು. ಬಿಎಸ್‌ಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ ಎಂದು ಸಮೀಕ್ಷೆ ಹೇಳುತ್ತಿದೆ.

‘ಕಾಂಗ್ರೆಸ್‌ಗೆ ಮತ ಹಾಕಲು ಬಯಸುವ ಶೇ 50ಕ್ಕಿಂತ ಹೆಚ್ಚು ಜನರು ಹಾಗೂ ಬಿಎಸ್‌ಪಿಗೆ ಮತ ಹಾಕಲು ಬಯಸುವ ನಾಲ್ಕನೇ ಮೂರರಷ್ಟು ಜನರು ಈ ಎರಡೂ ಪಕ್ಷಗಳ ನಡುವೆ ಮೈತ್ರಿ ಆಗಬೇಕು ಎಂಬ ಇಚ್ಛೆ ಹೊಂದಿದ್ದಾರೆ. ದಲಿತ ಸಮುದಾಯದಲ್ಲಿ ಈ ಇಚ್ಛೆ ಹೆಚ್ಚು ಪ್ರಬಲವಾಗಿದೆ’ ಎಂಬುದು ಸಮೀಕ್ಷೆಯ ಅಭಿಪ್ರಾಯ.

ಆದರೆ, ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪಾಲಿಗೆ ಒಂದು ಬೆಳ್ಳಿ ರೇಖೆಯೂ ಇದೆ. ಜೈ ಆದಿವಾಸಿ ಯುವ ಶಕ್ತಿ (ಜೆಎವೈಎಸ್‌) ಸ್ಥಾಪಕ ಹೀರಾಲಾಲ್‌ ಅಲಾವಾ ಅವರು ಕಾಂಗ್ರೆಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದು ಲೆಕ್ಕಾಚಾರವನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಛತ್ತೀಸಗಡದಲ್ಲಿ ‘ಕೈ’ಗೆ ಜೋಗಿ ಏಟು

* ಅಜಿತ್‌ ಜೋಗಿ ಅವರ ಜೆಸಿಸಿ 15% ಮತಗಳನ್ನು ಪಡೆಯಬಹುದು. ಜೋಗಿ ಅವರು ಕಾಂಗ್ರೆಸ್‌ನಲ್ಲೇ ಇದ್ದವರಾದ್ದರಿಂದ ಇದರಲ್ಲಿ ಸಿಂಹಪಾಲು ಕಾಂಗ್ರೆಸ್‌ ಮತಗಳೇ ಆಗಿರಲಿವೆ

* ಬಿಜೆಪಿ–ಕಾಂಗ್ರೆಸ್‌ ನಡುವೆ ನಿಕಟ ಸ್ಪರ್ಧೆ ಇದೆ. ಹಾಗಾಗಿ ಕಾಂಗ್ರೆಸ್‌ ಮತಗಳಿಗೆ ಜೆಸಿಸಿ ಕನ್ನ ಹಾಕಿದಷ್ಟು ಬಿಜೆಪಿಗೆ ಲಾಭ ಹೆಚ್ಚು

* ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರ ಪೈಕಿ ಆರರಲ್ಲಿ ಒಬ್ಬರು ಜೆಸಿಸಿ–ಬಿಎಸ್‌ಪಿ ಮೈತ್ರಿಕೂಟಕ್ಕೆ ಮತ ಹಾಕಲು ಬಯಸಿದ್ದಾರೆ. ಆದರೆ, ಬಿಜೆಪಿ ಸಾಂಪ್ರದಾಯಿಕ ಮತದಾರರಲ್ಲಿ 4% ಮಂದಿ ಮಾತ್ರ ಮೈತ್ರಿಕೂಟದತ್ತ ವಾಲಲಿದ್ದಾರೆ

* ಕಾಂಗ್ರೆಸ್‌ಗೆ ಬೀಳುತ್ತಿದ್ದ ದಲಿತ ಮತ್ತು ಬುಡಕಟ್ಟು ಸಮುದಾಯಗಳ ಮತಗಳಿಗೆ ಮೈತ್ರಿಕೂಟದಿಂದಾಗಿ ದೊಡ್ಡ ಏಟು ಬೀಳಲಿದೆ. ಕಾಂಗ್ರೆಸ್‌ಗೆ ಮತ ಹಾಕುತ್ತಿದ್ದ ದಲಿತರಲ್ಲಿ 23% ಮತ್ತು ಬುಡಕಟ್ಟು ಜನರಲ್ಲಿ ಶೇ 16ರಷ್ಟು ಮತದಾರರು ಜೆಸಿಸಿ–ಬಿಎಸ್‌ಪಿ ಮೈತ್ರಿಕೂಟಕ್ಕೆ ಮತ ಹಾಕುವುದಾಗಿ ಹೇಳಿದ್ದಾರೆ

* ಇದು ಹೀಗೆಯೇ ಆದರೆ, ಕಾಂಗ್ರೆಸ್‌ ಮತ್ತು ಬಿಜೆಪಿ ಪಡೆಯುವ ದಲಿತ ಮತ್ತು ಬುಡಕಟ್ಟು ಸಮುದಾಯದ ಮತಗಳ ಪ್ರಮಾಣ ಬಹುತೇಕ ಸಮಾನವಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.