ಮಾಯಾವತಿ
ಲಖನೌ: ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತು ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ಖಂಡಿಸಿ ಪಕ್ಷವು ದೇಶದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಬಿಆರ್‌ಎಸ್ ಮುಖ್ಯಸ್ಥೆ ಮಾಯಾವತಿ ಅವರು ಶನಿವಾರ ಹೇಳಿದ್ದಾರೆ.
‘ಅಮಿತ್ ಶಾ ಕ್ಷಮೆಯಾಚಿಸಬೇಕೆಂದು ಪಕ್ಷವು ಆಗ್ರಹಿಸಿದೆ. ಆದರೆ ಅವರು ಈವರೆಗೆ ಕ್ಷಮೆ ಕೇಳಿಲ್ಲ. ಆದ್ದರಿಂದ ಡಿ.24ರಂದು ರಾಷ್ಟ್ರವ್ಯಾಪಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ’ ಎಂದು ಮಾಯಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ದಲಿತ ಸಮುದಾಯ ಮತ್ತು ಇತರ ಹಿಂದುಳಿದ ಸಮುದಾಯಗಳು ಅಂಬೇಡ್ಕರ್ ಅವರನ್ನು ದೇವರಂತೆ ಪೂಜಿಸುತ್ತಾರೆ. ಅವರಿಗೆ ಅಮಿತ್ ಶಾ ಅಗೌರವ ತೋರಿರುವುದು ಜನರಿಗೆ ನೋವುಂಟು ಮಾಡಿದೆ. ಜನರು ಕೋಪಗೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರಿಗೆ ಅಗೌರವ ತೋರಬಾರದು. ಅವರಿಗೆ ಅಗೌರವ ತೋರಿದ ಪಕ್ಷಗಳಿಗೆ ನಾವೂ ಗೌರವ ನೀಡುವುದಿಲ್ಲ’ ಎಂದು ಹೇಳಿದ್ದಾರೆ.
ಅಂಬೇಡ್ಕರ್ ಅವರ ಬಗ್ಗೆ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ವಿರೋಧಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.