ADVERTISEMENT

ಸಿಗದ ಶಾ: ಬಿಎಸ್‌ವೈ ವಾಪಸ್; ಸಿಎಂ ಭೇಟಿಗೆ ನಿರಾಕರಿಸಿದ ರಾಷ್ಟ್ರೀಯ ಅಧ್ಯಕ್ಷ?

7 ಗಂಟೆ ಅಜ್ಞಾತ ಸ್ಥಳದಲ್ಲಿ ಸಿ.ಎಂ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:15 IST
Last Updated 23 ಆಗಸ್ಟ್ 2019, 20:15 IST
   

ನವದೆಹಲಿ: ಅನರ್ಹ ಶಾಸಕರ ಬೇಡಿಕೆಗೆ ಮಣಿದು ಇಲ್ಲಿಗೆ ದೌಡಾಯಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ಸದ್ಯ ಉದ್ಭವಿಸಿರುವ ಕಗ್ಗಂಟು ಬಿಡಿಸಲು ಪಕ್ಷದ ಅಧ್ಯಕ್ಷ ಅಮಿತ್ ಶಾ ಸಹಾಯ ಸಿಗದೇ ವಾಪಸ್ ಬೆಂಗಳೂರಿಗೆ ಮರಳಿದರು.

‘ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ನೀಡಿದ ಆಶ್ವಾಸನೆಯಂತೆ ಪ್ರಮುಖ ಖಾತೆಗಳನ್ನು ನಮಗೇ ನೀಡುವ ಬಗ್ಗೆ ಅಮಿತ್ ಶಾ ಅವರಿಂದ ಭರವಸೆ ಕೊಡಿಸಬೇಕು’ ಎಂದು ಅನರ್ಹ ಶಾಸಕರ ಗುಂಪಿನ ನೇತೃತ್ವ ವಹಿಸಿರುವ ರಮೇಶ ಜಾರಕಿಹೊಳಿ ಒತ್ತಡ ಹೇರಿದ್ದರು. ಅದನ್ನು ತಾಳಲಾರದೇ, ಗುರುವಾರ ರಾತ್ರಿಯೇ ಯಡಿಯೂರಪ್ಪ ದೆಹಲಿಗೆ ಬಂದಿದ್ದರು.

ಗೋವಾ ಪ್ರವಾಸದಲ್ಲಿದ್ದ ಶಾ ಅವರು, ಅನರ್ಹ ಶಾಸಕರನ್ನು ಕರೆದುಕೊಂಡು ಮಾತುಕತೆಗೆ ಬರುವ ಯಡಿಯೂರಪ್ಪನವರ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಲಿಲ್ಲ.

ADVERTISEMENT

‘ಅಮಿತ್ ಶಾ ಅವರೇ ಕರ್ನಾಟಕದಲ್ಲಿದ್ದ ಮೈತ್ರಿ ಸರ್ಕಾರ ಕೆಡವಿದ್ದಾರೆ’ ಎಂದು ಕಾಂಗ್ರೆಸ್‌ನವರು ಟೀಕಿಸುತ್ತಿದ್ದಾರೆ. ಈ ಹೊತ್ತಿನಲ್ಲಿ ಅನರ್ಹ ಶಾಸಕರನ್ನು ಭೇಟಿ ಮಾಡಿದರೆ, ರಾಜಕೀಯ ಅಪಪ್ರಚಾರಕ್ಕೆ ಕಾರಣವಾಗುತ್ತದೆ’ ಎಂದು ಶಾ ಅವರು ಯಡಿಯೂರಪ್ಪಗೆ ತಿಳಿಸಿದರು ಎನ್ನಲಾಗಿದೆ.

‘ಮುಖ್ಯಮಂತ್ರಿಯಾಗಲು ಅವಕಾಶ ಕೊಡಿ; ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತೇನೆ’ ಎಂದು ಹೇಳಿದ್ದೀರಿ. ಈಗ ನೀವೇ ಬಗೆಹರಿಸಿಕೊಳ್ಳಿ. ಬೇಕಿದ್ದರೆ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಿ’ ಎಂದು ಶಾ ಸೂಚನೆ ನೀಡಿದರು.

ಬಳಿಕ ನಡ್ಡಾ ಅವರನ್ನು ಭೇಟಿಯಾದ ಯಡಿಯೂರಪ್ಪ ಅವರು, ‘ಅನರ್ಹತೆಯ ಪ್ರಶ್ನೆ ಇತ್ಯರ್ಥವಾಗುವವರೆಗೆ ಪ್ರಮುಖ ಖಾತೆಗಳನ್ನು ಉಳಿಸಿಕೊಳ್ಳಬೇಕು ಎಂದು ಜಾರಕಿಹೊಳಿ ಮತ್ತವರ ತಂಡ ಹಟ ಹಿಡಿದಿದೆ. ಆಯಕಟ್ಟಿನ ಖಾತೆಗಳು ಬೇಕು ಎಂದು ಸಚಿವರಾಗಿರುವವರು ಒತ್ತಡ ಹೇರುತ್ತಿದ್ದಾರೆ. ಇಕ್ಕಟ್ಟು ಬಗೆಹರಿಸಲು ನೆರವಿಗೆ ಬನ್ನಿ’ ಎಂದು ಕೋರಿದರು.

‘ಶಾ ಅವರ ಜತೆ ಚರ್ಚಿಸಿ ಸಚಿವರಿಗೆ ಖಾತೆ ಹಂಚಿಕೆ ವಿಷಯ ಇತ್ಯರ್ಥ ಪಡಿಸುತ್ತೇನೆ. ಕೊಟ್ಟ ಭರವಸೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅನರ್ಹ ಶಾಸಕರಿಗೆ ತಿಳಿಸಿ ಎಂದು ನಡ್ಡಾ ಆಶ್ವಾಸನೆ ಕೊಟ್ಟರು’ ಎನ್ನಲಾಗಿದೆ.

ಅದಾದ ಬಳಿಕ, ಅನರ್ಹ ಶಾಸಕರನ್ನು ಭೇಟಿ ಮಾಡಿದ ಯಡಿಯೂರಪ್ಪ, ‘ಕೋರ್ಟ್‌ನಲ್ಲಿ ಇತ್ಯರ್ಥವಾದ 10 ದಿನದೊಳಗೆ ಸಂಪುಟ ವಿಸ್ತರಣೆ ಮಾಡಲಾಗುವುದು. ನೀವು ಇಟ್ಟ ನಂಬಿಕೆ ಹುಸಿಗೊಳಿಸುವುದಿಲ್ಲ ಎಂದು ವರಿಷ್ಠರು ವಾಗ್ದಾನ ಮಾಡಿದ್ದಾರೆ. ನೀವು ವಿಶ್ವಾಸ ಮತ್ತು ನೆಮ್ಮದಿಯಿಂದ ಇರಿ’ ಎಂದು ಮನವರಿಕೆ ಮಾಡಿಕೊಟ್ಟಿದ್ದಾಗಿ ಮೂಲಗಳು ಹೇಳಿವೆ.

ಸದ್ಯವೇ ಖಾತೆ ಹಂಚಿಕೆ: ಪ್ರಮಾಣ ವಚನ ಸ್ವೀಕರಿಸಿರುವ 17 ಸಚಿವರಿಗೆ ಸೋಮವಾರದೊಳಗೆ ಖಾತೆ ಹಂಚಿಕೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

7 ಗಂಟೆ ಅಜ್ಞಾತ ಸ್ಥಳದಲ್ಲಿ ಸಿ.ಎಂ

ದೆಹಲಿಗೆ ಬಂದಿದ್ದ ಯಡಿಯೂರಪ್ಪ ಅವರು ಶುಕ್ರವಾರ ಬೆಳಿಗ್ಗೆ 11.30 ರಿಂದ ಸಂಜೆ 6.30ರವರೆಗೆ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿತ್ತು.

ಕರ್ನಾಟಕ ಭವನದಿಂದ ಸರ್ಕಾರಿ ವಾಹನದಲ್ಲೇ ತೆರಳಿದ ಅವರು, ಚಾಣಕ್ಯಪುರಿ ಪೊಲೀಸ್‌ ಠಾಣೆ ಬಳಿ ವಾಹನದಿಂದ ಇಳಿದು, ಭದ್ರತಾ ಸಿಬ್ಬಂದಿಯನ್ನೆಲ್ಲ ವಾಪಸ್‌ ಕಳುಹಿಸಿ ಅಲ್ಲಿ ಕಾಯುತ್ತಿದ್ದ ಖಾಸಗಿ ವಾಹನದಲ್ಲಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.