ADVERTISEMENT

ಸತತ 6ನೇ ದಿನವೂ ನಡೆಯದ ಕಲಾಪ, ಮುಂದೂಡಿಕೆ

ಲೋಕಸಭೆ, ರಾಜ್ಯಸಭೆ ಕಲಾಪ ಮತ್ತೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 18:11 IST
Last Updated 20 ಮಾರ್ಚ್ 2023, 18:11 IST
ಸಂಸತ್ತು
ಸಂಸತ್ತು   

ನವದೆಹಲಿ: ಸಂಸತ್‌ನ ಉಭಯ ಸದನಗಳ ಕಲಾಪಗಳು ಸತತ ಆರನೇ ದಿನವೂ ನಡೆಯಲಿಲ್ಲ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸೋಮವಾರದ ಕಲಾಪ ಯಾವುದೇ ಚರ್ಚೆಯಿಲ್ಲದೆ ಮುಂದೂಡಿಕೆಯಾಯಿತು.

ಬ್ರಿಟನ್‌ನಲ್ಲಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಆಡಳಿತ ಪಕ್ಷ ಪಟ್ಟು ಹಿಡಿದಿದ್ದರೆ, ಅದಾನಿ ಪ್ರಕರಣದಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಪ್ರತಿಪಕ್ಷಗಳು ತಮ್ಮ ಪಟ್ಟು ಬಿಟ್ಟಿಲ್ಲ. ಎರಡೂ ಕಡೆಯ ಸದಸ್ಯರು ಪರಸ್ಪರ ಘೋಷಣೆ ಕೂಗುವುದರಲ್ಲೇ ಸಮಯ ಕಳೆದರು.

ಕಲಾಪ ನಡೆಯಲು ಆಡಳಿತ ಪಕ್ಷವೇ ಅಡ್ಡಗಾಲು ಹಾಕುತ್ತಿದೆ ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಪ್ರಮೋದ್ ತಿವಾರಿ ಆರೋಪಿಸಿದ್ದಾರೆ. ‘ಮಾರ್ಚ್ 13ರಿಂದಲೂ ಕಲಾಪ ನಡೆಯುತ್ತಿಲ್ಲ. ಪ್ರಧಾನಿಗೆ ಸೂಚನೆ ಇಲ್ಲದೇ ಹೀಗಾಗಲು ಸಾಧ್ಯವಿಲ್ಲ. ಜೆಪಿಸಿ ರಚಿಸಲು ಬಿಜೆಪಿ ಹೆದರುತ್ತಿರುವುದು ಏಕೆ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ‘ಎಲ್ಲ ಸಂಸದರಿಗೂ ಮಾತನಾಡಲು ಅವಕಾಶವಿದೆ. ಆದರೆ ಅದಕ್ಕೂ ಮುನ್ನ ನೋಟಿಸ್ ನೀಡಿರಬೇಕು ಎಂಬ ನಿಯಮವಿದೆ’ ಎಂದು ಸ್ಪೀಕರ್
ಓಂ ಬಿರ್ಲಾ ಹೇಳಿದರು. ಸದನಕ್ಕೆ ಫಲಕ ಹಿಡಿದು ಬಂದಿದ್ದ ಅಕಾಲಿದಳ ಸಂಸದೆ ಹರ್‌ಸಿಮ್ರತ್ ಬಾದಲ್ ಅವರನ್ನು ಸ್ಪೀಕರ್ ತರಾಟೆಗೆ ತೆಗೆದು ಕೊಂಡರು. ಫಲಕಗಳಿಗೆ ಅವಕಾಶವಿಲ್ಲ ಎಂದರು.

ಸದನ ಇರುವುದು ಘೋಷಣೆ ಕೂಗಲಷ್ಟೇ ಅಲ್ಲ ಎಂದ ಬಿರ್ಲಾ, ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಿದರು. ಮತ್ತೆ ಸದನ ಸಮಾವೇಶವಾದಾಗಲೂ, ಇದೇ ಪರಿಸ್ಥಿತಿ ಮುಂದುವರಿದಿದ್ದರಿಂದ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

ರಾಜ್ಯಸಭೆಯಲ್ಲಿ ಬೆಳಿಗ್ಗೆ ಹಾಗೂ ಮಧ್ಯಾಹ್ನದ ಕಲಾಪದಲ್ಲೂ ಇದೇ ಪರಿಸ್ಥಿತಿ ಕಂಡು ಬಂತು. ಅದಾನಿ ಪ್ರಕರಣದ ಬಗ್ಗೆ ಚರ್ಚೆ ಹಾಗೂ ಜೆಪಿಸಿ ತನಿಖೆಗೆ ಆಗ್ರಹಿಸಿ 13 ಸಂಸದರು ನೋಟಿಸ್ ನೀಡಿದ್ದಾರೆ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಹೇಳಿದರು. ಈ ಸಮಯದಲ್ಲಿ ಗದ್ದಲ ಉಂಟಾಗಿದ್ದರಿಂದ ಅವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಆದರೆ ಮಧ್ಯಾಹ್ನ ಕಲಾಪ ಶುರುವಾದ ಒಂದೇ ನಿಮಿಷದಲ್ಲಿ ಮತ್ತೆ ಮುಂದೂಡಿಕೆ ಮಾಡಲಾಯಿತು.

ಬಂಡವಾಳ ಬಯಲಾಗಬಹುದು ಎಂಬ ಕಾರಣಕ್ಕೆ ಸರ್ಕಾರವು ಜೆಪಿಸಿ ರಚನೆಗೆ ಹಿಂದೇಟು ಹಾಕುತ್ತಿದೆ ಎಂದು ಎಸ್‌ಪಿ ಸಂಸದ ರಾಮ್‌ಗೋಪಾಲ್ ಯಾದವ್ ಆರೋಪಿಸಿದರು. ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳು ಎತ್ತಿರುವ ಪ್ರಶ್ನೆಗೆ ಸದನದಲ್ಲಿ ಉತ್ತರಿಸಬೇಕು ಎಂದು ಡಿಎಂಕೆ ಸಂಸದ ಎ.ರಾಜಾ ಆಗ್ರಹಿಸಿದರು.

ಕಲಾಪ ಆರಂಭಕ್ಕೂ ಮುನ್ನ, ವಿವಿಧ ಪಕ್ಷಗಳು ಸಂಸದರು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಸ್ಪೀಕರ್‌ಗೆ ರಾಹುಲ್ ಪತ್ರ

ಲಂಡನ್‌ನಲ್ಲಿ ತಾವು ಮಾಡಿದ ಭಾಷಣಕ್ಕೆ ಸಂಬಂಧಪಟ್ಟಂತೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ನೀಡುವಂತೆ ಕೋರಿ ರಾಹುಲ್ ಗಾಂಧಿ ಅವರು ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದಿದ್ದಾರೆ.

ಕಳೆದವಾರ ಲಂಡನ್‌ನಿಂದ ವಾಪಸಾದ ಬಳಿಕ ಬಿರ್ಲಾ ಅವರನ್ನು ರಾಹುಲ್ ಭೇಟಿ ಮಾಡಿದ್ದರು. ವಿದೇಶಾಂಗ ವ್ಯವಹಾರಗಳ ಮೇಲಿನ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ರಾಹುಲ್ ಅವರು ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದರು. ದೇಶಕ್ಕೆ
ಅಪಮಾನವಾಗುವಂತಹ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.