ದೆಹಲಿ ಬಡಾ ಹಿಂದೂ ರಸ್ತೆಯಲ್ಲಿ ಕುಸಿದ ಕಟ್ಟಡದ ತೆರವು ಕಾರ್ಯಾಚರಣೆ
ಎಕ್ಸ್ ಚಿತ್ರ
ನವದೆಹಲಿ: ದೆಹಲಿಯ ಬಡಾ ಹಿಂದೂ ರಾವ್ ಪ್ರದೇಶದಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ ಶುಕ್ರವಾರ ಕುಸಿದ ಪರಿಣಾಮ 46 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಮನೋಜ್ ಶರ್ಮಾ ಎಂದು ಗುರುತಿಸಲಾಗಿದೆ. ಇವರು ಇದೇ ಕಟ್ಟಡದಲ್ಲಿದ್ದ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಕುಸಿದ ಕಟ್ಟಡದ ಅವಶೇಷಗಳಲ್ಲಿ ಸಿಲುಕಿಕೊಂಡಿದ್ದ ಇವರನ್ನು ಹೊರಕ್ಕೆ ತೆಗೆದು, ಹಿಂದೂ ರಾವ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಕಟ್ಟಡದ ಹೊರಭಾಗದಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ಗೂ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಘಟನೆ ನಸುಕಿನಲ್ಲಿ ನಡೆದಿದೆ. ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ನೆಲಮಹಡಿ, ಮೊದಲ ಮತ್ತು ಎರಡನೇ ಮಹಡಿ ಕುಸಿದಿದೆ. ಇದರಿಂದ ಮೂರು ಮಳಿಗೆ ಮತ್ತು ಗೋದಾಮು ಸಂಪೂರ್ಣ ನೆಲಸಮವಾಗಿದೆ. ಇಲ್ಲಿ ಬ್ಯಾಗ್ ಮತ್ತು ಕ್ಯಾನ್ವಾಸ್ ಬಟ್ಟೆಗಳ ಅಂಗಡಿಗಳಿದ್ದವು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಮೃತ ಮನೋಜ್ ಶರ್ಮಾ ಅವರು 7ಎ ಸಂಖ್ಯೆಯ ಮಳಿಗೆಯಲ್ಲಿ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇತರ ಸಾವು ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಕಟ್ಟಡದ ಕಳಪೆ ನಿರ್ವಹಣೆ ಮತ್ತು ಅಜಾಗರೂಕತೆಯಿಂದ ಸಂಭವಿಸಿದ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಡಿಸಿಪಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.