ವಿರಾರ್ ಪೂರ್ವ ಭಾಗದಲ್ಲಿ ಕುಸಿದ ಕಟ್ಟಡದಲ್ಲಿ ಸಿಲುಕಿದ್ದ ಜನರ ರಕ್ಷಣೆಗಾಗಿ ಎನ್‌ಡಿಆರ್‌ಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು
–ಪಿಟಿಐ ಚಿತ್ರ
₹5 ಲಕ್ಷ ಪರಿಹಾರ ಘೋಷಿಸಿದ ಮುಖ್ಯಮಂತ್ರಿ | ಎನ್‌ಡಿಆರ್‌ಎಫ್, ಪೊಲೀಸರಿಂದ ರಕ್ಷಣಾ ಕಾರ್ಯ | ಸುರಕ್ಷಿತ ಪ್ರದೇಶಗಳಿಗೆ ನಿವಾಸಿಗಳ ಸ್ಥಳಾಂತರ
ಪಾಲ್ಘರ್: ಮುಂಬೈ ಸಮೀಪದ ವಿರಾರ್‌ನ ನಾರಂಗಿ ರಸ್ತೆಯಲ್ಲಿ ಸಂಭವಿಸಿದ ಕಟ್ಟಡ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 17ಕ್ಕೆ ಏರಿದೆ.
ವಸಯಿ ತಾಲ್ಲೂಕಿನ ವಿರಾರ್ ಪೂರ್ವ ಭಾಗದ ಚಾಮುಂಡಿ ನಗರ ಹಾಗೂ ವಿಜಯನಗರದ ನಡುವೆ ಇರುವ ನಾಲ್ಕು ಅಂತಸ್ತಿನ ಕಟ್ಟಡ ‘ರಮಾಬಾಯಿ ಅಪಾರ್ಟ್‌ಮೆಂಟ್’ ಮಂಗಳವಾರ ಮಧ್ಯರಾತ್ರಿ ಕುಸಿದಿತ್ತು. ಈ ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಪೈಕಿ ಆರು ಮಂದಿ ಸ್ಥಿತಿ ಗಂಭೀರವಾಗಿದೆ.
ಈ ಅಪಾರ್ಟ್‌ಮೆಂಟ್‌ನಲ್ಲಿ 50 ಫ್ಲ್ಯಾಟ್‌ಗಳಿದ್ದು, ಕುಸಿದ ಭಾಗದಲ್ಲಿ 12 ಫ್ಲ್ಯಾಟ್‌ಗಳಿದ್ದವು. ಇವುಗಳಲ್ಲಿ 50–60 ಮಂದಿ ವಾಸವಾಗಿದ್ದರು. ಈ ಕಟ್ಟಡವನ್ನು 2012ರಲ್ಲಿ ನಿರ್ಮಿಸಲಾಗಿತ್ತು.
ಕಟ್ಟಡ ನಿರ್ಮಿಸಿದ್ದ ಸಾಯಿದತ್ತ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮಾಲೀಕ ನಿಟ್ಟಲ್ ಗೋಪಿನಾಥ್ ಸಾನೆ ಅವರನ್ನು ವಿರಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಸಯಿ–ವಿರಾರ್ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ನಗರಸಭೆ ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡು ಅವಶೇಷಗಳ ಅಡಿ ಸಿಲುಕಿದವರನ್ನು ರಕ್ಷಿಸಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದ ಸುತ್ತಲಿನ ಮನೆಗಳನ್ನು ತೆರವುಗೊಳಿಸಲಾಗಿದ್ದು, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಅನೇಕರು ನಿರಾಶ್ರಿತರಾಗಿದ್ದು, ಚಂದನಸರ್ ಸಮಾಜ ಮಂದಿರಕ್ಕೆ ಸ್ಥಳಾಂತರಿಸಲಾಗಿದೆ. ಅವರಿಗೆ ಆಹಾರ, ನೀರು, ವೈದ್ಯಕೀಯ ನೆರವು ಒದಗಿಸಲಾಗಿದೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ₹5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.