ADVERTISEMENT

’ಉಪಚುನಾವಣೆ ಮುಂದೂಡಿ’: ಸುಪ್ರೀಂ ಕೋರ್ಟ್‌ಗೆ ಅನರ್ಹರ ಅರ್ಜಿ

ಅನರ್ಹರ ಅರ್ಜಿ ಬುಧವಾರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 19:18 IST
Last Updated 8 ನವೆಂಬರ್ 2019, 19:18 IST
   

ನವದೆಹಲಿ: ಕರ್ನಾಟಕ ವಿಧಾನಸಭೆಯ15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ನಿಗದಿಯಾಗಿರುವ ಉಪ ಚುನಾವಣೆಯನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದ್ದು, ಮುಂದಿನ ಬುಧವಾರ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಲಿದೆ. ಶುಕ್ರವಾರ ಬೆಳಿಗ್ಗೆ ನ್ಯಾಯಪೀಠದ ಎದುರು ಈ ಕುರಿತು ಅನರ್ಹರ ಪರ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಮೌಖಿಕ ಮನವಿ ಸಲ್ಲಿಸಿದರು.

‘ಸೋಮವಾರದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ ಆಗಲಿದೆ. ಅನರ್ಹತೆ ಆದೇಶದ ಸಿಂಧುತ್ವ ಪ್ರಶ್ನಿಸಿ ನಾವು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಲಾಗಿದೆ. ಮುಂದಿನ ಸೋಮವಾರ ಮತ್ತು ಮಂಗಳವಾರ ಕೋರ್ಟ್‌ಗೆ ರಜೆ ಇರುವ ಕಾರಣ ತೀರ್ಪು ವಿಳಂಬವಾದರೆ, ನಾಮಪತ್ರ ಸಲ್ಲಿಕೆಗೂ ಅವಕಾಶ ದೊರೆಯದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿದರು.

ADVERTISEMENT

ಆದರೆ, ತಕ್ಷಣಕ್ಕೆ ಈ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿದ ನ್ಯಾಯಮೂರ್ತಿ ರಮಣ, ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಸೂಚಿಸಿದರು. ನ್ಯಾಯಪೀಠದ ಸೂಚನೆಯ ಮೇರೆಗೆ ಮಧ್ಯಾಹ್ನ ಅನರ್ಹರ ಪರ ವಕೀಲರು ಅರ್ಜಿ ಸಲ್ಲಿಸಿದರು.

ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸ್ಪೀಕರ್‌ ನೀಡಿರುವ ಆದೇಶದ ಸಿಂಧುತ್ವ ಪ್ರಶ್ನಿಸಿ 17 ಜನ ಅನರ್ಹರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್‌ 25ರಂದು ಪೂರ್ಣಗೊಳಿಸಿರುವ ಪೀಠವು ತೀರ್ಪನ್ನು ಕಾಯ್ದಿರಿಸಿದೆ. ಅಕ್ಟೋಬರ್‌ 21ಕ್ಕೆ ನಿಗದಿಯಾಗಿದ್ದ 15 ಕ್ಷೇತ್ರಗಳ ಉಪ ಚುನಾವಣೆಯನ್ನು ವಿಚಾರಣೆ ಬಾಕಿ ಇರುವ ಕಾರಣ ಚುನಾವಣಾ ಆಯೋಗವೇ ಡಿಸೆಂಬರ್‌ 5ಕ್ಕೆ ಮುಂದೂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.