ADVERTISEMENT

ಆಜಾದ್ ನ್ಯಾಯಾಂಗ ಬಂಧನಕ್ಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 19:56 IST
Last Updated 21 ಡಿಸೆಂಬರ್ 2019, 19:56 IST
ಚಂದ್ರಶೇಖರ್ ಆಜಾದ್
ಚಂದ್ರಶೇಖರ್ ಆಜಾದ್   

ನವದೆಹಲಿ(ಪಿಟಿಐ/ಎಎಫ್‌ಪಿ):ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿದೆಹಲಿಯ ದರಿಯಾಗಂಜ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರುಭೀಮ್‌ ಆರ್ಮಿಯ ಮುಖಂಡ ಚಂದ್ರಶೇಖರ್ ಆಜಾದ್ ಸೇರಿ, 15 ಜನರನ್ನುಶನಿವಾರ ಬಂಧಿಸಿದ್ದಾರೆ.

ಇಲ್ಲಿನ ತೀಸ್ ಹಜಾರಿ ನ್ಯಾಯಾಲಯವುಆಜಾದ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಉಳಿದ 14 ಜನರನ್ನುಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

‘ಆಜಾದ್ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ’:ಬಂಧಿತ 15 ಮಂದಿಯಲ್ಲಿ ಚಂದ್ರಶೇಖರ್ ಆಜಾದ್ ಅವರನ್ನು ಹೊರತುಪಡಿಸಿ, ಉಳಿದ 14 ಜನರನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು. ಆಜಾದ್ ಅವರನ್ನು ಹಾಜರುಪಡಿಸದಿರುವುದಕ್ಕೆ, ಅವರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ‘ಆಜಾದ್ ಎಲ್ಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಅವರನ್ನು ತಕ್ಷಣವೇ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು’ ಎಂದು ವಕೀಲರು ಆಗ್ರಹಿಸಿದರು.

ADVERTISEMENT

‘ಆಜಾದ್ ಅವರನ್ನು ಪ್ರಶ್ನಿಸಲಾಗುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು’ ಎಂದು ಪೊಲೀಸರು ಮಾಹಿತಿ ನೀಡಿದರು. ಶನಿವಾರ ಸಂಜೆ ಆಜಾದ್ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು.

ಪ್ರತಿಭಟನೆ:ಪ್ರತಿಭಟನಕಾರರ ಬಂಧನವನ್ನು ವಿರೋಧಿಸಿ, ಶನಿವಾರ ಬೆಳಿಗ್ಗೆ ನೂರಾರು ಜನರು ದರಿಯಾಗಂಜ್ ಠಾಣೆ ಎದುರು ಮತ್ತು ದೆಹಲಿ ಪೊಲೀಸ್‌ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸುತ್ತಿದ್ದವರಲ್ಲಿ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು. ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ತಕ್ಷಣವೇ ಬಿಡುಗಡೆ ಮಾಡಿ ಎಂದು ನ್ಯಾಯಾಲಯವು ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.